

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಯಾರದೋ ಒತ್ತಡಕ್ಕೆ ಮಣಿದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿದ್ದು, ಪೂರ್ವ ತಯಾರಿಯಿಲ್ಲದ ಶುರು ಮಾಡಿದ ಕಾರಣ ಸಮೀಕ್ಷೆಯೇ ಅಸ್ತವ್ಯಸ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಜಾತಿ ಜನಗಣತಿ ವಿರೋಧಿಸುತ್ತಿಲ್ಲ, ಆತುರಾತುರವಾಗಿ ನಡೆಸುವುದು ಸರಿಯಲ್ಲ ಎನ್ನುವುದೇ ಪಕ್ಷದ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ವಿರೋಧಿಗಳು ಸಮೀಕ್ಷೆಯನ್ನು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದುಳಿದ ಎಲ್ಲ ಜಾತಿ, ವರ್ಗಗಳ ಅಭಿವೃದ್ಧಿಯೇ ನೈಜ ಕಾಳಜಿಯಾಗಿದ್ದರೆ ಹೀಗೆ ತರಾತುರಿಯಲ್ಲಿ ಸಮೀಕ್ಷೆಗೆ ಕೈಹಾಕುತ್ತಿದ್ದಿಲ್ಲ ಎಂದು ತಿರುಗೇಟು ನೀಡಿದರು.
ಒತ್ತಡ ತಂತ್ರ
ರಾಜ್ಯದ ಏಳು ಕೋಟಿ ಜನರ ಸಮೀಕ್ಷೆ, 60 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯುವುದು 15 ದಿನಗಳಲ್ಲಿ ಆಗುವ ಕೆಲಸವಲ್ಲ. ಅಭಿವೃದ್ಧಿಪಡಿಸಿದ ಆ್ಯಪ್, ಜಿಯೋ ಟ್ಯಾಗ್, ನಮೂದಿಸಿದ ಯುಎಚ್‌ಐಡಿ ಎಲ್ಲವೂ ಗೊಂದಲಮಯ, ತಾಂತ್ರಿಕ ಸಮಸ್ಯೆಗಳು ತುಂಬಿಕೊಂಡಿವೆ ಎಂದು ಎತ್ತಿ ತೋರಿಸಿದ್ದೆವು.
ಇದೆಲ್ಲವನ್ನೂ ಸರಿಪಡಿಸಿ ವೈಜ್ಞಾನಿಕ, ಸಮರ್ಪಕ ಸಮೀಕ್ಷೆ ನಡೆಸಿದರೆ ವಾಸ್ತವಿಕ ದತ್ತಾಂಶ, ನಿಖರ ಮಾಹಿತಿ ಲಭಿಸುತ್ತದೆ ಎಂದಿದ್ದೆವು. ಆದರೆ ಶಿಕ್ಷಕರ ಒತ್ತಡ ತಂತ್ರ ಪ್ರಯೋಗಿಸಿ, ಇಲ್ಲದ ತೊಂದರೆ ನೀಡಿ ಸಮೀಕ್ಷೆ ಕಾರ್ಯಕ್ಕೆ ಹಚ್ಚಿದ್ದಾರೆ.
ಇದೀಗ ನೆಪವೊಡ್ಡಿ ಸಮೀಕ್ಷೆ ಅವಧಿ ವಿಸ್ತರಿಸಿದ್ದಾರೆ. ಒತ್ತಡಕ್ಕೆ ಒಳಗಾದ ಆಯೋಗವು ಸಮಸ್ಯೆ ಕಡೆಗಣಿಸಿ, ಗುರಿ ಸಾಧಿಸಿ ಬಿಡುತ್ತೇವೆ ಎಂದು ಹೊರಟಿದೆ. ಸಮೀಕ್ಷೆಯ ನೈಜ ಉದ್ದೇಶವೇ ಬೇರೆ ಎಂಬ ಅನುಮಾನಕ್ಕೆ ಅವಕಾಶ ಮಾಡಿ ಕೊಟ್ಟಿದೆ ಎಂದು ದೂಷಿದರು.
ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ವಿಪರೀತ ಒತ್ತಡ, ಅಪಘಾತದಿಂದ ಸಂಭವಿಸಿದ ಸಾವುಗಳಿವು. ಹಾಸನದ ಬೇಲೂರಿನಲ್ಲಿ ಸಮೀಕ್ಷೆಗೆ ಹೋದ ಶಿಕ್ಷಕಿಗೆ ನಾಯಿ ಕಚ್ಚಿದ್ದರೆ, ಅಂಗವಿಕಲರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಜನಗಣತಿ ಜತೆಗೆ ಜಾತಿ ಗಣತಿಗೆ ನಿರ್ಧರಿಸಿದೆ. ಆದರೂ ರಾಜ್ಯದಲ್ಲಿ ಅವಸರದಿಂದ ಅವೈಜ್ಞಾನಿಕವಾದ ಸಮೀಕ್ಷೆ ನಡೆಸಸಲಾಗುತ್ತಿದೆ. ಹಿಂದೆ ಕಾಂತರಾಜು ವರದಿ ಸಂದರ್ಭದಲ್ಲೂ ಇದೇ ತರಹದ ಗೊಂದಲ ಸೃಷ್ಟಿಯಾಗಿತ್ತು. ಅದೇ ಸ್ಥಿತಿ ಪುನರಾವರ್ತನೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.