ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ ನಿಯೋವಿಸ್ ಧೂಮಕೇತು

neowise comet
Published on

ಬೆಂಗಳೂರು: ಖಗೋಳ ಪ್ರಿಯರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ‘C/2020 F3’ ಅಥವಾ ನಿಯೋವಿಸ್ ಎಂಬ ಹೆಸರಿನ ಧೂಮಕೇತು ಭಾರತದಲ್ಲಿ ಆಗಸ್ಟ್​ ಮಧ್ಯಭಾಗದ ತನಕ ಗೋಚರಿಸಲಿದೆ. ಇದನ್ನು ಸಣ್ಣ ಟೆಲಿಸ್ಕೋಪ್ ಮೂಲಕವೂ ನೋಡಬಹುದಾಗಿದೆ. ನಾರ್ದರ್ನ್ ಹೆಮಿಸ್ಪಿಯರ್​ ನಿಂದ ಪ್ರಜ್ವಲಿಸುತ್ತ ಗೋಚರಿಸುವ ಧೂಮಕೇತು ಇದು.

ಯಾವಾಗ ಗೋಚರಿಸುತ್ತದೆ? ಆಗಸ್ಟ್​ ಮೊದಲ ಎರಡು ವಾರಗಳ ಅವಧಿಯಲ್ಲಿ ನಿಯೋವಿಸ್ ಧೂಮಕೇತುವು ದಿನವೂ ಮುಂಜಾನೆ 4.30 ಮತ್ತು 5 ಗಂಟೆಯ ನಡುವೆ ಈಶಾನ್ಯ ಭಾಗದಲ್ಲಿ ಉರ್ಸಾ ಮೇಜರ್ ಕಾನ್​ಸ್ಟಲೇಷನ್​​ನಲ್ಲಿ ಗೋಚರಿಸಲಿದೆ. ಆದರೆ, ಆ ಹೊತ್ತಿನಲ್ಲಿ ಆಕಾಶ ಶುಭ್ರವಾಗಿದ್ದರಷ್ಟೇ ಧೂಮಕೇತು ಕಾಣಲು ಸಾಧ್ಯ ಎಂಬುದು ಪರಿಣತರ ಹೇಳಿಕೆ.

ಪರಿಣತರು ಹೇಳುವ ಪ್ರಕಾರ, ಈ ಧೂಮಕೇತು ಟೆಲಿಸ್ಕೋಪ್ ಮೂಲಕ ಆಗಸ್ಟ್ ಮೊದಲ ವಾರವೇ ಅದ್ಭುತವಾಗಿ ಗೋಚರಿಸಲಿದೆ. ಈ ಧೂಮಕೇತುವನ್ನು ಈ ವರ್ಷ ಮಾರ್ಚ್ 27ರಂದು ಪತ್ತೆಹಚ್ಚಲಾಗಿದೆ. ಇದು ಸೂರ್ಯನ ಹತ್ತಿರ ಸಾಗುತ್ತ ಸಾಗುತ್ತ ಇನ್ನಷ್ಟು ಪ್ರಜ್ವಲಿಸುವಂತೆ ಗೋಚರಿಸುತ್ತದೆ.

ಧೂಮಕೇತುವನ್ನು ಇನ್ನು ಈ ರೀತಿ ಭೂಮಿಯಿಂದ ನೋಡಬೇಕಾದರೆ ಬಹುಶಃ 7,000 ವರ್ಷ ಕಾಯಬೇಕಾದೀತು. ಆಗಸ್ಟ್​ ತಿಂಗಳ ಮೊದಲ ಎರಡು ವಾರಗಳ ಅವಧಿಯಲ್ಲಿ ಧೂಮಕೇತು ಬಹಳ ಸ್ಪಷ್ಟವಾಗಿ ಗೋಚರಿಸಲಿದೆ. ಮುಂದಿನ ದಿನಗಳಲ್ಲಿ ಆಕಾಶದಲ್ಲಿ ಒಂದು ಪ್ರಕಾಶಮಾನವಾದ ಹಸಿರು ಮಿಶ್ರಿತ ಕೇಸರಿ ಬಣ್ಣ ಚೆಲ್ಲಿದಂತಹ ಗುರುತನ್ನು ನಿರೀಕ್ಷಿಸಬಹುದು. ನಿಯೋವಿಸ್ ಧೂಮಕೇತು ಸದ್ಯವೇ ಭೂಮಿಗೆ ಅತಿ ಸನಿಹದಲ್ಲಿ ಕಾಣಿಸಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net