VIDEO| ಭಾರತದ ಬಗ್ಗೆ ಅಮೆರಿಕದಲ್ಲಿ 'ವಿಡಂಬನೆ' ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

virdas
Published on

ವಾಷಿಂಗ್ಟನ್​​/ಮುಂಬೈ: ನಟ ಹಾಗೂ ಸ್ಟಾಂಡ್​ಅಪ್​ ಕಾಮೆಡಿಯನ್ ವೀರ್​ ದಾಸ್​ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅಮೆರಿಕದಲ್ಲಿ ಮಾಡಿದ ಕಾಮೆಡಿ 'ಪರ್ಫಾರ್ಮೆನ್ಸ್​' ಒಂದರಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ಆಡಿರುವ ಮಾತುಗಳು ಹಲವು ರಾಷ್ಟ್ರಭಕ್ತರ ಕೆಂಗಣ್ಣಿಗೆ ಗುರಿಯಾಗಿವೆ.

ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲಿರುವ ಜಾನ್​ ಎಫ್​ ಕೆನೆಡಿ ಸೆಂಟರ್​ನಲ್ಲಿ ಐತಿಹಾಸಿಕವಾದ ಸ್ಟಾಂಡ್​ಅಪ್​ ಕಾಮೆಡಿ ಶೋ​ ಮಾಡಲು ಹೋಗಿದ್ದ ದಾಸ್​​, ತಮ್ಮ ಭಾರತದ ಬಗೆಗಿನ ವ್ಯಂಗ್ಯ ಮತ್ತು ವಿಡಂಬನೆಯ ಭಾಷಣದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿದ್ದಾರೆ. 'ಐ ಕಂ ಫ್ರಂ ಟೂ ಇಂಡಿಯಾಸ್​​' ಎಂಬ ಶೀರ್ಷಿಕೆಯಡಿ ದಾಸ್​​ ಆಡುವ ಟೀಕೆಯ ಮಾತುಗಳು ಅವರ ಅಭಿಮಾನಿಗಳ ಪ್ರಶಂಸೆ ಗಳಿಸಿದೆ. ಆದರೆ ಜೊತೆಜೊತೆಗೇ, ಹಲವು ನೆಟ್ಟಿಗರು, ತಮ್ಮ ದೇಶದ ಬಗೆಗೇ ಇನ್ನೊಂದು ದೇಶಕ್ಕೆ ಹೋಗಿ ವ್ಯಂಗ್ಯ ಮಾಡುವುದು ಎಂಥಾ ಹಾಸ್ಯ ಎಂದು ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಹಲವು ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವೀರ್​ ದಾಸ್​ರ ಈ ವ್ಯಂಗ್ಯಮಯ ಮಾನೋಲಾಗ್​​ ದೇಶಕ್ಕೆ ಅವಮಾನ ಮಾಡುವಂಥದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್​ ಪಂಡಿತ್​, "ತಮ್ಮದೇ ದೇಶವನ್ನು ಪರದೇಶದಲ್ಲಿ ಜರಿಯುವುದು ಉಗ್ರವಾದ. ವೀರ್​ ದಾಸ್​​ ಮೇಲೆ ಯುಎಪಿಎ ಅಡಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕು" ಎಂದಿದ್ದಾರೆ.

ವೀರ್​ ದಾಸ್​ ವಿರುದ್ಧ ಅದಾಗಲೇ ಎರಡು ಪೊಲೀಸ್​ ಕಂಪ್ಲೇಂಟುಗಳೂ ದರ್ಜಾಗಿವೆ ಎನ್ನಲಾಗಿದೆ. ತಮ್ಮ ಭಾಷಣದ ಬಗೆಗಿನ ಕಾಮೆಂಟುಗಳಿಗೆ ಪ್ರತಿಕ್ರಿಯಿಸಿರುವ ದಾಸ್​​, ನನ್ನ ಭಾಷಣವು ಬೇರೆ ಬೇರೆ ಕೆಲಸ ಮಾಡುವ ಎರಡು ಪ್ರತ್ಯೇಕ ಭಾರತಗಳ ದ್ವಂದ್ವತೆಯ ಬಗೆಗಿನ ಒಂದು ವಿಡಂಬನೆಯಾಗಿದೆ... ಜಗತ್ತು ಭಾರತವನ್ನು ಗೌರವದಿಂದ ನೋಡುತ್ತದೆ ಹಾಗೂ ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಹೊಂದಿದ್ದೇನೆ" ಎಂದು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net