

ಬೆಂಗಳೂರು: ಇತ್ತೀಚೆಗಷ್ಟೇ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಅದೇ 'ಕಾಮಿಡಿ ಕಿಲಾಡಿಗಳು' ಕಾಮಿಡಿ ಶೋನಲ್ಲಿ ಅಭಿನಯಿಸಿದ್ದ ನಟ ಚಂದ್ರಶೇಖರ್ ಸಿದ್ದಿ ಇದೀಗ ದುರಂತ ಅಂತ್ಯ ಕಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೂಲಕ ಸಿದ್ದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಈ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
'ನೀನಾಸಂ'ನಲ್ಲಿ ನಟನಾ ತರಬೇತಿ ಪಡೆದಿದ್ದ ಸಿದ್ದಿ, ಕಳೆದ ಮೂರು ತಿಂಗಳಿಂದ ಅಭಿನಯಿಸಲು ಯಾವುದೇ ಅವಕಾಶಗಳು ಸಿಗದ ಹಿನ್ನಲೆ ತೀರ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಬೇಸರದಿಂದಲೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಚಂದ್ರಶೇಖರ್, ಕಾಡಿನ ಸಮೀಪ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸಿದ್ದಿ ಅವರ ಸ್ನೇಹಿತರು ಮತ್ತು ಕುಟುಂಬಸ್ಥರು ಕಣ್ಣೀರಿಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.