ಕಾಮೆಡ್-ಕೆ ಟಾಪ್ 10ರಲ್ಲಿ ರಾಜ್ಯದ ಐವರು: ಫಲಿತಾಂಶ ಪ್ರಕಟ | 100 ರ‌್ಯಾಂಕ್​ನಲ್ಲಿ 52 ಸ್ಥಾನ ಕರ್ನಾಟಕದ ಪಾಲು

Comed K
Published on

ಬೆಂಗಳೂರು: ದೇಶಾದ್ಯಂತ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜು, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಇಂಜಿನಿಯರಿಂಗ್ ಮತ್ತು ಬಿ.ಟೆಕ್ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಿದ ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮೊದಲ ಟಾಪ್ 10ರಲ್ಲಿ ರಾಜ್ಯದ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಪ್ರಥಮ ಸ್ಥಾನವನ್ನು ತಮಿಳುನಾಡಿನ ಎ. ವೆಂಕಟ್ ಗಳಿಸಿದ್ದು, 2 ಮತ್ತು 3ನೇ ಸ್ಥಾನವನ್ನು ಬೆಂಗಳೂರಿನ ವಿಶಾಲ್ ಬೈಸಾನಿ ಹಾಗೂ ಅಪೂರ್ವ್ ತಂಡನ್ ಪಡೆದಿದ್ದಾರೆ. ಅಲ್ಲದೆ, ಮೊದಲ 100 ರ್ಯಾಂಕ್​ನಲ್ಲಿ 52 ಸ್ಥಾನ ಕರ್ನಾಟಕದ ಪಾಲಾಗಿದೆ. ಒಟ್ಟಾರೆ ಶೇ.90ರಿಂದ 100 ಫಲಿತಾಂಶವನ್ನು 5,930 ಅಭ್ಯರ್ಥಿಗಳು ಪಡೆದಿದ್ದು, ಇದರಲ್ಲಿ ರಾಜ್ಯದ 1768 ಅಭ್ಯರ್ಥಿಗಳಿದ್ದಾರೆ. ಶೇ.80ರಿಂದ 90 ಫಲಿತಾಂಶವನ್ನು 5,620 ಮಂದಿ ಪಡೆದಿದ್ದು, ರಾಜ್ಯದ 1753 ವಿದ್ಯಾರ್ಥಿಗಳಿದ್ದಾರೆ. 6,347 ಮಂದಿ ಶೇ.70ರಿಂದ 80 ಫಲಿತಾಂಶ ಪಡೆದಿದ್ದು, ರಾಜ್ಯದ 2138 ಅಭ್ಯರ್ಥಿಗಳಿದ್ದಾರೆ.

ಜೂ.19ರಂದು ದೇಶಾದ್ಯಂತ 154 ನಗರದ 230 ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಸಲಾಗಿತ್ತು. 61,635 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕರ್ನಾಟಕದ 21,108 ಹಾಗೂ 36,278 ಕರ್ನಾಟಕೇತರ ಅಭ್ಯರ್ಥಿಗಳು ಸೇರಿ 57,387 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದ ನಂಬರ್ ಬಳಸಿ ಲಾಗಿನ್ ಆಗಿ ಫಲಿತಾಂಶವನ್ನು ಕಾಮೆಡ್-ಕೆ ವೆಬ್​ಸೈಟ್ www.comedk.org ನಲ್ಲಿ ನೋಡಬಹುದು.

ಕೌನ್ಸೆಲಿಂಗ್ ವೇಳಾಪಟ್ಟಿ ಶೀಘ್ರ: ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಅನ್ನು ಆನ್​ಲೈನ್ ಮೂಲಕ ಶೀಘ್ರದಲ್ಲಿಯೇ ನಡೆಸಲಾಗುತ್ತದೆ. ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ಬಳಸಿ ಮೂಲ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್​ಲೋಡ್ ಮಾಡುವಂತೆ ತಿಳಿಸಿದೆ. ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ತಿಳಿಸಿದೆ. ಮುಂದಿನ ವರ್ಷದಿಂದ ಸಿಇಟಿ ಮೂಲಕವೇ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

ಅವಧಿ ವಿಸ್ತರಣೆ: 2022-23ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿನ ಖಾಸಗಿ, ಅನುದಾನಿತ ಮತ್ತು ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಹೊಸ ಭಾಷೆ, ಹೊಸ ಸಂಯೋಜನೆ, ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಕಾಲೇಜಿನ ಆಡಳಿತ ಮಂಡಳಿಯ ಅರ್ಜಿ ಸಲ್ಲಿಕೆ ಅವಧಿಯನ್ನು ಜು.11ರವರೆಗೆ ವಿಸ್ತರಿಸಿದೆ.

ಪಿಯು ಸ್ಕ್ಯಾನ್ ಪ್ರತಿ ಇಂದಿನಿಂದ ಲಭ್ಯ: ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಸ್ಕ್ಯಾನ್ ಪ್ರತಿಗಳು ಇಂದಿನಿಂದ (ಜು.6) ಪಿಯು ಇಲಾಖೆ ವೆಬ್​ಸೈಟ್​ನಲ್ಲಿ ಲಭ್ಯವಾಗಲಿವೆ. ವಿದ್ಯಾರ್ಥಿಗಳು ಸ್ಕ್ಯಾನ್ ಪ್ರತಿಯನ್ನು puc.karnataka.gov.inನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆಗೆ ಜು.7ರಿಂದ 13ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ.ಗಳನ್ನು ನಿಗದಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net