ಥಿಯೇಟರ್‌ಗೆ ಬನ್ನಿ: ಕನ್ನಡ ಪ್ರೇಕ್ಷಕರಿಗೆ ವಿಭಿನ್ನವಾಗಿ ನಟ ಕಿರಣ್ ರಾಜ್ ಮನವಿ

rani 2
Published on

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಓಡುತ್ತಿಲ್ಲ, ಕನ್ನಡ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ ಎಂಬ ದೂರು ಅತಿ ಹೆಚ್ಚು ಬಂದಿರುವುದು ಈ ವರ್ಷ. ಕಳಪೆ ಚಿತ್ರಗಳಿರಲಿ, ಉತ್ತಮ ವಿಷಯಾಧಾರಿತ ಸಿನಿಮಾಗಳೂ ಸೋಲುತ್ತಿವೆ ಎಂಬ ಆತಂಕ ಚಿತ್ರರಂಗದ್ದು. ಹೇಗಾದರೂ ಮಾಡಿ ಚಿತ್ರಮಂದಿರಗಳನ್ನು ತುಂಬಿಸಬೇಕು ಎಂದು ಚಿತ್ರತಂಡಗಳು ವಿಭಿನ್ನ ಪ್ರಯತ್ನಕ್ಕೆ ಮುಂದಾಗುತ್ತಿವೆ. ಇತ್ತೀಚೆಗೆಷ್ಟೇ ‘ನಾಟ್‌ಔಟ್’ ತಂಡ ಫಸ್ಟ್ ಹಾಫ್​ ಫ್ರೀ, ಸೆಕೆಂಡ್ ಹಾಫ್​ ಟಿಕೆಟ್’ ಎಂಬ ವಿನೂತನ ಪ್ರಯೋಗ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿರುವ ‘ರಾನಿ’ ಚಿತ್ರತಂಡವೂ ವಿಭಿನ್ನವಾಗಿ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ವೆಲ್ಕಮ್ ಮಾಡುತ್ತಿದೆ.

ಏನು ಈ ಪ್ರಯತ್ನ?: ‘ರಾನಿ’ ಚಿತ್ರತಂಡ ವಿಡಿಯೋ ಮೂಲಕ ಥಿಯೇಟರ್‌ಗೆ ಬರುವಂತೆ, ಕನ್ನಡ ಸಿನಿಮಾಗಳನ್ನು ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದೆ. ವಿಡಿಯೋದಲ್ಲಿ ನಾಯಕ ಕಿರಣ್ ರಾಜ್ ಥಿಯೇಟರ್‌ನತ್ತ ಹೆಜ್ಜೆ ಹಾಕುತ್ತ ಬರುವಾಗ ಹಿನ್ನೆಲೆಯಲ್ಲಿ ವರನಟ ರಾಜಕುಮಾರ್ ಅಭಿನಯದ ‘ಮಯೂರ’ ಚಿತ್ರದ ಡೈಲಾಗ್ ಕೇಳುತ್ತದೆ. ಕಿರಣ್, ಕನ್ನಡ ಚಿತ್ರರಂಗದ ಗತವೈಭವ ದಿನಗಳ ಮೆಲುಕು ಹಾಕುತ್ತಾರೆ. ಬಳಿಕ ಖಾಲಿ ಥಿಯೇಟರ್‌ನಲ್ಲಿ ಮೆಟ್ಟಿಲ ಮೇಲೆ ಕುಳಿತು, ಮನೆಯಲ್ಲಿ ಕುಳಿತು ಸಿನಿಮಾ ನೋಡುವುದಕ್ಕೂ, ಚಿತ್ರಮಂದಿರದಲ್ಲಿ ಇಡೀ ಕುಟುಂಬ, ಸ್ನೇಹಿತರ ಜತೆ ಸಿನಿಮಾ ನೋಡುವುದಕ್ಕೂ ಇರುವ ವ್ಯತ್ಯಾಸದ ಬಗ್ಗೆ ಮನವರಿಕೆ ಮಾಡುತ್ತಾರೆ. ಅಲ್ಲದೇ ಒಂದು ಸಿನಿಮಾ ಹಿಂದಿನ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಶ್ರಮದ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ನೋಡಿದ ಖುಷಿ ಹಾಗೂ ಥಿಯೇಟರ್ ಅನುಭವ ಸಿಗಬೇಕಾದ್ರೆ ಚಿತ್ರಮಂದಿರಗಳಿಗೆ ಬನ್ನಿ’ ಎಂದು ಮನವಿ ಮಾಡಿದ್ದಾರೆ. ಕೊನೆಯಲ್ಲಿ ‘ನಾನಿಡೋ ಪ್ರತಿಯೊಂದು ಹೆಜ್ಜೆ, ನಮ್ ಇಂಡಸ್ಟ್ರಿ ಬೆಳವಣಿಗೆಗೆ ಪೂರಕವಾಗಿರುತ್ತೆ’ ಎಂದು ಹೇಳಿ ‘ರಾನಿ’ ವೀಕ್ಷಣೆಗೆ ಚಿತ್ರಮಂದಿರಗಳಿಗೆ ಬನ್ನಿ ಎಂದು ಪ್ರೇಕ್ಷಕರನ್ನು ವಿಭಿನ್ನವಾಗಿ ಆಹ್ವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net