ಬೀದಿಗಿಳಿದು ಕೈಜೋಡಿಸಲಿ

2
ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಟೌನ್‌ಶಿಪ್ ವಿರೋಧಿಸಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಸಭೆಯನ್ನು ನಿವೃತ್ತ ನ್ಯಾಯ ಮೂರ್ತಿ ಗೋಪಾಲ ಗೌಡ ಉದ್ಘಾಟಿಸಿದರು. ಅಳಂದ ಶಾಸಕ ಬಿ.ಆರ್.ಪಾಟೀಲ್, ಮಹಾರಾಷ್ಟ್ರದ ಮಾಜಿ ಶಾಸಕ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪೃಥ್ವಿರೆಡ್ಡಿ ಇತರರಿದ್ದರು.
Published on

ಶಾಸಕರಿಗೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸವಾಲು

ನಂದಗುಡಿ: ಶಾಸಕರಿಗೆ ಅಧಿಕಾರ ಮುಖ್ಯವಲ್ಲ, ಬೀದಿಗಳಿದು ರೈತರ ಜತೆ ಕೈ ಜೋಡಿಸಿದರೆ ನೀವು ಜನಪ್ರತಿನಿಧಿಯಾಗಿದ್ದಕ್ಕೆ ಸಾರ್ಥಕವಾಗುತ್ತದೆ. ಪತ್ರಿಕೆಗಳಲ್ಲಿ ಬೆಂಬಲ ನೀಡುವುದಾಗಿ ಹೇಳಿ ಯಾರ ಜತೆಗೊ ಎಲ್ಲಿಗೋ ಓಡಿ ಹೋಗುವುದಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಥಳೀಯ ಶಾಸಕರಿಗೆ ಸವಾಲು ಹಾಕಿದರು.

ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಮಂಗಳವಾರ ಭೂ ಸ್ವಾಧೀನ ವಿರೋಧಿ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರೈತ ಶಕ್ತಿಯೇ ಜನಶಕ್ತಿ. ಹೊಸಕೋಟೆ ತಾಲೂಕಿನ ಶಾಸಕರಿಗೂ ಮುಂದಿನ ಚುನಾವಣೆಗೆ ಎಚ್ಚರಿಕೆ ವಹಿಸಬೇಕಾಗುತ್ತೆ, ರೈತರ ಜತೆ ಕೈ ಜೋಡಿಸದೇ ಹೋದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಮಾಜಿ ಶಾಸಕರಾಗಬೇಕಾಗುತ್ತದೆ. ಇದು ಅವರಿಗೆ ಕೊನೆ ಎಚ್ಚರಿಕೆಯಾಗಿದೆ. ನಂದಗುಡಿ ಟೌನ್‌ಶಿಪ್‌ಗೆ ಸರ್ಕಾರ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಎಕರೆ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವುದನ್ನು ಸರ್ಕಾರ ಹಿಂಪಡೆಯಬೇಕು ಎಂದರು.

ದುಷ್ಟರನ್ನು ಸಿಎಂ ದೂರವಿಡಬೇಕು: ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸುತ್ತ ಇರುವ ದುಷ್ಟರನ್ನು ದೂರ ಇರಿಸುವ ಕೆಲಸ ಮಾಡಬೇಕು. ಅಲ್ಲದೆ ನಂದಗುಡಿ ಟೌನ್‌ಶಿಪ್ ಅನ್ನು ಕೈ ಬಿಡುವ ಮೂಲಕ ರೈತ ಪರವಾಗಿದ್ದೇವೆ ಎಂದು ಸಾಬೀತು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದರು.

ಯಾವುದೇ ಸರ್ಕಾರ ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದು, ಸಂವಿಧಾನದ ಮೇಲೆ ಗೌರವವೇ ಇಲ್ಲದಂತಾಗಿದೆ. 18 ವರ್ಷದಿಂದ ತೆರೆಮರೆಯಲ್ಲಿದ್ದ ಉಪನಗರ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡು ರೈತರ ಯಾವುದೇ ಅನುಮತಿ ಇಲ್ಲದೆ ಟೌನ್ ಶಿಪ್ ಮಾಡಲು ಹೋಗುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸವಾಗಿದೆ ಎಂದರು. ಬಳ್ಳಾರಿಯ ರೈತ ಮುಖಂಡರಾದ ಮಾಧವ ರೆಡ್ಡಿ, ವೀರಸಂಗಯ್ಯ, ರಘುನಾಥ್, ಆಲೀಬಾಬಾ, ಸುಭಾಸ್, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆಂಚೇಗೌಡ, ಸದಸ್ಯರಾದ ಐ.ಸಿ.ಮುನಿಸ್ವಾಮಿಗೌಡ, ಎಂ.ಬಿ.ವೆಂಕಟೇಶ್, ಧರ್ಮೇಶ್, ಚಂದ್ರಮೋಹನ್, ಶಂಕರನಾರಾಯಣ್, ಮುನಿರಾಜ್, ಟಿ.ಆನಂದ್ ಇದ್ದರು.

ಕಾಲ್ನಡಿಗೆ ಜಾಥಾ

ಭೂಸ್ವಾಧೀನ ವಿರೋಧಿ ಸಮಿತಿ ಕಚೇರಿಯಿಂದ ಗಾಂಧಿ ವೃತ್ತದವರೆಗೂ ಎತ್ತಿನ ಬಂಡಿ, ಟ್ರ್ಯಾಕ್ಟರ್ ಮೂಲಕ ಮಹಿಳೆಯರು ಸೇರಿ ಸಾವಿರಾರು ರೈತರು ಕಾಲ್ನಡಿಗೆಯಲ್ಲಿ ತೆರಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಚಿಂತಾಮಣಿ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಬಳಿಕ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ನಂದಗುಡಿಯಲ್ಲಿ ಹೋಟೆಲ್, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.

ರೈತರ ಬದುಕಿಗೆ ಕೊಳ್ಳಿ

ಶಾಶ್ವತ ನೀರಾವರಿ ಯೋಜನೆ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ನಂದಗುಡಿ ಹೋಬಳಿಯಲ್ಲಿ ಫಲವತ್ತಾದ ಜಮೀನಿದ್ದು, ರೈತರು ಕೃಷಿ ಚಟುವಟಿಕೆ, ಹೈನುಗಾರಿಕೆ, ಫಲ-ಪುಷ್ಪ ಬೆಳೆಯುವುದರ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net