

Shahid Afridi : ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಚಾರವಾಗಿ ಟೀಮ್ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆಯ ಪ್ರಮಾದ ಕಾರಣ ಎಂದು ಅಫ್ರಿದಿ ಹೇಳಿದ್ದರು. ಇದಕ್ಕೆ ಖಡಕ್ ಉತ್ತರ ನೀಡಿದ ಶಿಖರ್ ಧವನ್, ನಾವು ಕಾರ್ಗಿಲ್ ಯುದ್ಧದಲ್ಲಿ ನಿಮ್ಮನ್ನು ಮಕಾಡೆ ಮಲಗಿಸಿದ್ದೇವೆ. ನೀವು ಈಗಾಗಲೇ ತುಂಬಾ ಬಿದ್ದಿದ್ದೀರಿ, ಇನ್ನೂ ಎಷ್ಟು ಅಂತ ಬೀಳುತ್ತೀರಿ. ನಿಷ್ಪ್ರಯೋಜಕ ಕಾಮೆಂಟ್ಗಳನ್ನು ಮಾಡುವ ಬದಲು, ನಿಮ್ಮ ದೇಶದ ಪ್ರಗತಿಯಲ್ಲಿ ನಿಮ್ಮ ಮನಸ್ಸನ್ನು ಬಳಸುವುದು ಉತ್ತಮ. ನಮ್ಮ ಭಾರತೀಯ ಸೇನೆ ಮೇಲೆ ನಮಗೆ ಹೆಮ್ಮೆ ಎಂದಿದ್ದಾರೆ.
ಇದಾದ ಬಳಿಕ ಧವನ್, ಟ್ವೀಟ್ಗೆ ಉತ್ತರ ನೀಡಿರುವ ಅಫ್ರಿದಿ, ಗೆಲುವು ಮತ್ತು ಸೋಲಿನ ಬಗ್ಗೆ ಮರೆತುಬಿಡೋಣ. ಶಿಖರ್ ಬನ್ನಿ, ಸ್ವಲ್ಪ ಚಹಾ ಕುಡಿಯೋಣ ಎಂದಿದ್ದಾರೆ. ಅಲ್ಲದೆ, ಚಹಾ ಕುಡಿಯುತ್ತಿರುವ ಚಿತ್ರವನ್ನು ಸಹ ಅಫ್ರಿದಿ ಹಂಚಿಕೊಂಡಿದ್ದಾರೆ. ಆದರೆ, ಧವನ್ ಇನ್ನೂ ಅಫ್ರಿದಿ ಪೋಸ್ಟ್ಗೆ ಪ್ರತಿಕ್ರಿಯಿಸಿಲ್ಲ. ಆದರೆ, ಭಾರತೀಯರು ಮಾತ್ರ ಖಡಕ್ ಉತ್ತರ ನೀಡಿದ್ದಾರೆ. ಪೋಸ್ಟ್ನ ಅಡಿಯಲ್ಲಿರುವ ಎಲ್ಲ ಕಾಮೆಂಟ್ಗಳು ಅಫ್ರಿದಿಯನ್ನು ಅಣಕಿಸುವಂತಿದೆ.
ಪಾಕಿಸ್ತಾನದ ಇಂದಿನ ಸ್ಥಿತಿಯನ್ನು ಅಣಕಿಸಿ, ಅಫ್ರಿದಿಗೆ ಭಾರತೀಯರು ತಿರುಗೇಟು ನೀಡುತ್ತಿದ್ದಾರೆ. ಸದ್ಯ ಪಾಕಿಸ್ತಾನ ಆರ್ಥಿಕತೆಯಲ್ಲಿ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮೊದಲು ನಿಮ್ಮ ದೇಶದ ಸ್ಥಿತಿಯನ್ನು ಸರಿಪಡಿಸಿಕೊಳ್ಳಿ, ತಿನ್ನೋಕು ನಿಮಗೆ ಗತಿಯಿಲ್ಲ ಅಂತ ಭಾರತೀಯರು ಕಾಮೆಂಟ್ಗಳ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನದ ಚಾನೆಲ್ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಫ್ರಿದಿ ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಅವರು ಅನಗತ್ಯವಾಗಿ ಪಾಕಿಸ್ತಾನವನ್ನು ದೂಷಿಸುತ್ತಿದ್ದಾರೆ. ಭಾರತದಲ್ಲಿ ಪಟಾಕಿ ಸಿಡಿದರೂ ಅದು ಪಾಕಿಸ್ತಾನದ ತಪ್ಪು. ಅವರು ಕಾಶ್ಮೀರದಲ್ಲಿ ಸುಮಾರು ಎಂಟು ಲಕ್ಷ ಸೈನಿಕರನ್ನು ಹೊಂದಿದ್ದಾರೆ. ಆದರೂ ಇದು ಸಂಭವಿಸಿದೆ. ಅಂದರೆ ಅವರು ಅಸಮರ್ಥರು. ಅವರು ತಮ್ಮದೇ ಆದ ಜನರನ್ನು ರಕ್ಷಿಸಿಕೊಳ್ಳಲು ಅಸಮರ್ಥರು ಎಂದು ಅಫ್ರಿದಿ ಹೇಳಿದರು. (ಏಜೆನ್ಸೀಸ್)