

ಬೆಂಗಳೂರು: ದೇಶದ ವಿವಿಧ ಖಾಸಗಿ ಇಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ನಡೆಸುವ ಕಾಮೆಡ್-ಕೆ ಪರೀಕ್ಷೆಯು ಮೇ 12 ರಂದು ನಡೆಯಲಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ.
ಈ ಕುರಿತು ಮಂಗಳವಾರ ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್. ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮೆಡ್-ಕೆ ಮತ್ತು ಯುನಿ-ಗೇಜ್ ಸಹಯೋಗದೊಂದಿಗೆ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜು ಮತ್ತು ದೇಶದಲ್ಲಿ 55 ವಿಶ್ವವಿದ್ಯಾಲಯಗಳಲ್ಲಿರುವ 22 ಸಾವಿರ ಸೀಟುಗಳ ಭರ್ತಿಗೆ ಈ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಏ.5 ಕೊನೆಯ ದಿನವಾಗಿದೆ. ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯಗಳೂ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯಲಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳಿಗೆ ಅಣಕು ಪರೀಕ್ಷೆ: ದೇಶದ 200ಕ್ಕೂ ಹೆಚ್ಚು ನಗರಗಳ 400ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಕಾಮೆಡ್-ಕೆ ಕೌಶಲ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ಈ ಬಾರಿಯಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಮತ್ತು ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವುದರಿಂದ ಕಂಪ್ಯೂಟರ್‌ನಲ್ಲಿ ಉತ್ತರಿಸುವುದು ಅಭ್ಯಾಸವಾಗಲಿ ಎಂಬ ಕಾರಣದಿಂದ ಅಭ್ಯರ್ಥಿಗಳಿಗೆ ೆ.15ರಿಂದ ಅಣಕು ಪರೀಕ್ಷೆಗಳು ಇರಲಿದೆ ಎಂದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಒಗ್ಗೂಡಿ ಏಕರೂಪದ ಸಿಇಟಿ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಕಾಲೇಜುಗಳ ಒಪ್ಪಿಗೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿರುವ ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪ್ರತ್ಯೇಕ ಸಿಇಟಿ ಬದಲು ಏಕರೂಪದ ಸಿಇಟಿ ಮಾಡಬೇಕೆಂದು ಸೂಚಿಸಿದ್ದರು. ಇದಕ್ಕೆ ಖಾಸಗಿ ಕಾಲೇಜುಗಳಿಂದ ವಿರೋಧ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ 11 ನ್ಯಾಯಮೂರ್ತಿಗಳ ಪೀಠ ನಮ್ಮ ಪರವಾಗಿ ತೀರ್ಪು ನೀಡಿದ್ದು, ಪರೀಕ್ಷೆ ನಡೆಸುವುದು ನಮ್ಮ ಹಕ್ಕು. ಇದಕ್ಕೆ ಸರ್ಕಾರ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.