ಅಂತರಿಕ್ಷದಲ್ಲಿರುವ ವಾಯುವು ಏಳು ವಿಧದಲ್ಲಿ ಸಂಚರಿಸುತ್ತದೆ: ಹೇಗೆಂಬುದನ್ನು ವಿವರಿಸಿದ್ದಾರೆ ಸ್ವರ್ಣವಲ್ಲಿಶ್ರೀಗಳು...

Sudina 4 Yoga Vasista
Published on
ಸೃಷ್ಟಿಯ ಆಖ್ಯಾಯಿಕೆಯಲ್ಲಿ ಆಕಾಶ, ಅಹಂಕಾರ, ವಾಯುಗಳ ಸೃಷ್ಟಿಯನ್ನು ಹೇಳಿ, ಅನಂತರ ಆಕಾಶತನ್ಮಾತ್ರೆಯ (ಶಬ್ದತನ್ಮಾತ್ರೆ) ಸೃಷ್ಟಿಯನ್ನು ಹೇಳಿದ್ದಾರೆ. ಶಬ್ದತನ್ಮಾತ್ರೆಯಿಂದಲೇ ಮುಂದೆ ವೇದಗಳ ಆವಿರ್ಭಾವವಾಗಲಿದೆ. ವೇದಶಬ್ದಗಳಿಂದ ಜಗತ್ತಿನಲ್ಲಿರುವ ಅನೇಕ ವಸ್ತುಗಳ ಸೃಷ್ಟಿ ಮುಂದೆ ಆಗಲಿದೆ.

ಆಕಾಶಾದಿ ಸೃಷ್ಟಿಗಿಂತ ಮೊದಲು ಈಶ್ವರ ಮತ್ತು ಜೀವಗಳು ಆವಿರ್ಭವಿಸಿವೆ. ಇಲ್ಲಿ ಹೇಳಲ್ಪಟ್ಟ ಜೀವನು ಪ್ರಥಮಜೀವ (ಹಿರಣ್ಯಗರ್ಭ). ಈಗ ಉತ್ಪತ್ತಿಯಾಗಿರುವ ವಾಯುವೇ ಅವನ ಪ್ರಾಣ. ಹೀಗೆ ಪ್ರಾಣಧಾರಣೆ ಮಾಡಿರುವ ಪ್ರಥಮ ಜೀವನಿಂದಲೇ ಬ್ರಹ್ಮಾಂಡದ ಒಳಗಿರುವ ಹದಿನಾಲ್ಕು ಲೋಕಗಳ ಸೃಷ್ಟಿ ಮುಂದೆ ಆಗಲಿದೆ. ಸದ್ಯಕ್ಕೆ ಅವನು ಪ್ರಾಣಧಾರಣೆ ಮಾತ್ರ ಮಾಡಿದ್ದಾನೆ. ಇವು ಹಿಂದಿನ ಲೇಖನಗಳಲ್ಲಿ ಬಂದಿರುವ ಸೃಷ್ಟಿಪ್ರಕ್ರಿಯೆಯ ಸಂಕ್ಷೇಪ.

ಈ ಎಲ್ಲ ಸೃಷ್ಟಿಪ್ರಕ್ರಿಯೆ ಹಿಂದಿನ ಸರ್ಗದ ಪ್ರಳಯಾನಂತರ ಪ್ರಾರಂಭವಾಗಿದೆ. ಈಗ ವಾಯುವಿನಿಂದ ಸ್ಪರ್ಶತನ್ಮಾತ್ರೆಯ ಉತ್ಪತ್ತಿಯನ್ನು ಹೇಳುತ್ತಿದ್ದಾರೆ. ಸಾಂಖ್ಯದರ್ಶನವು ತನ್ಮಾತ್ರೆಗಳಿಂದ ಭೂತಗಳ ಸೃಷ್ಟಿಯನ್ನು ಹೇಳುತ್ತದೆ. ಯೋಗವಾಸಿಷ್ಠವು ಭೂತಗಳಿಂದ ತನ್ಮಾತ್ರೆಯ ಸೃಷ್ಟಿಯನ್ನು ಹೇಳುತ್ತದೆ. ತನ್ಮಾತ್ರೆಗಳು ಭೂತಗಳ ತಿರುಳಿನ ಭಾಗವಾದ್ದರಿಂದ ಯೋಗವಾಸಿಷ್ಠ ಹೀಗೆ ಹೇಳಿರಬಹುದು.

‘ಶ್ರೀರಾಮ! ವಾಯುವಿನ ರೂಪದಲ್ಲಿ ತೋರಿಕೊಂಡಿರುವ ಆ ಪರಾಶಕ್ತಿಯು ತನ್ನ ಚೈತನ್ಯದ ವೇಗದಿಂದಲೇ ಸ್ಪುರಣೆಗೆ ಒಳಗಾಗಿ ಸ್ಪರ್ಶತನ್ಮಾತ್ರೆ ಆಗುತ್ತದೆ. ತಾನೀಗ ಸ್ಪರ್ಶತನ್ಮಾತ್ರೆಯಾಗಿ ತೋರಿಕೊಳ್ಳಬೇಕೆಂದು ಭಾವಿಸುತ್ತಿದ್ದಂತೆ ಅನುಕ್ಷಣದಲ್ಲಿಯೇ ಸ್ಪರ್ಶತನ್ಮಾತ್ರೆ ಹುಟ್ಟಿಕೊಳ್ಳುತ್ತದೆ. (ಸ್ಪರ್ಶವು ಚರ್ಮದಿಂದ ತಿಳಿಯಲ್ಪಡಬೇಕಾದ, ವಾಯುವಿನ ವಿಶೇಷಗುಣ. ತನ್ಮಾತ್ರೆಯು ವಾಯುವಿನ ತಿರುಳಿನ ಭಾಗ.

ಆ ತಿರುಳಿಗೆ ಸ್ಪರ್ಶಗುಣ ಇರುತ್ತದೆ. ಆದ್ದರಿಂದಲೇ ಅದನ್ನು ಸ್ಪರ್ಶತನ್ಮಾತ್ರೆ ಎನ್ನುತ್ತಾರೆ.) ಈ ಸ್ಪರ್ಶತನ್ಮಾತ್ರೆಯೇ ಎಲ್ಲ ವಿಧದ ಸ್ಪರ್ಶಗಳಿಗೂ ಕಾರಣ. ಶೀತ-ಉಷ್ಣ, ಮೃದು-ಕಠಿಣ ಎಂಬ ಎಲ್ಲ ವಿಧದ ಸ್ಪರ್ಶಗಳಿಗೆ ಸ್ಪರ್ಶತನ್ಮಾತ್ರೆಯೇ ಕಾರಣ. (ಸ್ಪರ್ಶಗುಣವು ತೇಜಸ್ಸು, ಜಲ ಮತ್ತು ಪೃಥಿವಿಗಳಲ್ಲೂ ಇದೆ. ಆದರೆ ಸ್ಪರ್ಶವು ವಾಯುವಿನ ವಿಶೇಷ ಗುಣವೇ ಹೊರತು ತೇಜಸ್ಸು, ಜಲ, ಪೃಥಿವಿಗಳ ವಿಶೇಷಗುಣವಲ್ಲ. ಆದ್ದರಿಂದ ಎಲ್ಲ ಸ್ಪರ್ಶಗಳಿಗೂ ವಾಯುವಿನಲ್ಲಿರುವ ಸ್ಪರ್ಶತನ್ಮಾತ್ರೆಯೇ ಕಾರಣ ಎನ್ನಲಾಗಿದೆ.) ಈ ಸ್ಪರ್ಶತನ್ಮಾತ್ರೆಯು ಆವಹ, ಪ್ರವಹ ಮುಂತಾದ ಎಲ್ಲ ವಿಧದ ಪವನಸ್ಕಂಧಗಳಿಗೆ ಕಾರಣವಾಗಿದೆ.

(ಅಂತರಿಕ್ಷದಲ್ಲಿರುವ ವಾಯುವು ಏಳು ವಿಧದಲ್ಲಿ ಸಂಚರಿಸುತ್ತದೆ.) ಜಗತ್ತಿನಲ್ಲಿ ಗೋಚರಿಸುತ್ತಿರುವ ಎಲ್ಲ ವಿಧದ ಸ್ಪರ್ಶಗಳಿಗೂ ಈ ಸ್ಪರ್ಶತನ್ಮಾತ್ರೆಯೇ ಕಾರಣ. ಜಗತ್ತಿನಲ್ಲಿರುವ ವಿವಿಧ ಸ್ಪರ್ಶಗಳೆಂಬ ಮಹಾವೃಕ್ಷಕ್ಕೆ ಈ ಸ್ಪರ್ಶತನ್ಮಾತ್ರೆಯೇ ಬೀಜ. ಎಲ್ಲ ಪ್ರಾಣಿಗಳ ಕ್ರಿಯೆಗಳ ಹಿನ್ನೆಲೆಯಲ್ಲಿರುವ ಸ್ಪಂದಗಳಿಗೆ ಸ್ಪರ್ಶತನ್ಮಾತ್ರೆ ಮೂಲವಾಗಿದೆ. ಇಂತಹ ಸ್ಪರ್ಶತನ್ಮಾತ್ರೆಯು ವಾಯುವಿನಲ್ಲಿ ಹುಟ್ಟಿಕೊಳ್ಳುತ್ತದೆ ಅಥವಾ ತೋರಿಕೊಳ್ಳುತ್ತದೆ.’

‘ಹೀಗೆ ವಾಯು ಮತ್ತು ಸ್ಪರ್ಶತನ್ಮಾತ್ರೆ ಉತ್ಪತ್ತಿಯಾದ ನಂತರ ವಾಯುವಿನ ರೂಪದ ಆ ಪರದೇವತೆಯಿಂದ ತೇಜಸ್ಸಿನ ಸೃಷ್ಟಿಯಾಗುತ್ತದೆ. ಆ ಪರದೇವತೆಯು ತನ್ನನ್ನೇ ತಾನು ಪ್ರಕಾಶಸ್ವರೂಪಿ ಎಂದು ಭಾವಿಸಿಕೊಂಡಾಗ ತೇಜಸ್ಸು ಹುಟ್ಟಿಕೊಳ್ಳುತ್ತದೆ. ಅಲ್ಲದೆ ಹಿಂದಿನಂತೆ ತೇಜಸ್ಸಿನ ಸಾರವಾದ ತೇಜಸ್ತನ್ಮಾತ್ರೆ (ರೂಪತನ್ಮಾತ್ರೆ) ಹುಟ್ಟಿಕೊಳ್ಳುತ್ತದೆ. ಅಗ್ನಿ, ಸೂರ್ಯ, ವಿದ್ಯುತ್ ಮುಂತಾದವುಗಳಲ್ಲಿರುವ ತೇಜಸ್ಸಿಗೆ ಈಗ ಹುಟ್ಟಿರುವ ತೇಜಸ್ತನ್ಮಾತ್ರೆಯೇ ಬೀಜ. ಸೂರ್ಯ, ಅಗ್ನಿ, ವಿದ್ಯುದಾದಿಗಳು ಈಗ ಇನ್ನೂ ಹುಟ್ಟಿಲ್ಲ. ಇವೆಲ್ಲ ಮುಂದೆ ಹುಟ್ಟಲಿವೆ.

ಮುಂದೆ ಹುಟ್ಟಲಿರುವ ಈ ಎಲ್ಲ ತೇಜಸ್ಸುಗಳೆಂಬ ಮಹಾವೃಕ್ಷಕ್ಕೆ ಈ ತೇಜಸ್ತನ್ಮಾತ್ರೆಯೇ ಬೀಜ. ಅಲ್ಲದೆ ಬೇರೆ ಬೇರೆ ರೂಪಗಳುಳ್ಳ (ಬಣ್ಣ) ವಿಸ್ತಾರ ಸಂಸಾರವು ಈ ತೇಜಸ್ತನ್ಮಾತ್ರೆಯಿಂದಲೇ ಹುಟ್ಟಿಕೊಳ್ಳಲಿದೆ.’ ‘ಇದಾದ ನಂತರ ಜಲದ ಉತ್ಪತ್ತಿಯಾಗುತ್ತದೆ. ತೇಜಸ್ಸಿನ ರೂಪದಲ್ಲಿರುವ ಆ ಪರಾಶಕ್ತಿಯಿಂದಲೇ ಜಲದ ಉತ್ಪತ್ತಿ. (ಪರಾಶಕ್ತಿ ಎಂದರೆ ಪರಮಾತ್ಮ. ತಾನು ರಸಗಳ ಸಮೂಹವಾದ ಜಲವೆಂದು ಭಾವಿಸುವ ಪರಮಾತ್ಮನು ತನ್ನನ್ನು ತಾನು ಜಲವಾಗಿ ತೋರಿಸಿಕೊಳ್ಳುತ್ತಾನೆ.) ಅಲ್ಲದೆ ಆ ಜಲದ ಸಾರವಾಗಿರುವ ರಸತನ್ಮಾತ್ರೆ ಹುಟ್ಟಿಕೊಳ್ಳುತ್ತದೆ.

ನಾಲಗೆಯಿಂದ ಆಸ್ವಾದಿಸಲ್ಪಡುವ ಎಲ್ಲ ಪ್ರಕಾರದ ರಸಗಳಿಗೆ ರಸತನ್ಮಾತ್ರೆಯೇ ಕಾರಣ. ಮುಂದೆ ಹೇಳಲಿರುವ ನದೀ, ಸಮುದ್ರ, ಮೋಡ, ಮಳೆ ಮುಂತಾದ ವಾರಿವಿಲಾಸಗಳಿಗೆ ಈಗ ಉತ್ಪತ್ತಿಯಾಗಿರುವ ರಸತನ್ಮಾತ್ರೆಯೇ ಕಾರಣ. ಎಲ್ಲ ಪ್ರಾಣಿಗಳೂ ತಮ್ಮ ತಮ್ಮ ನಾಲಗೆಗೆ ರುಚಿಯಾದ ಆಹಾರವನ್ನೇ ಬಯಸುತ್ತವೆ. ಮನುಷ್ಯನು ಅದರಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದಾನೆ. ಈ ಎಲ್ಲ ರುಚಿಗಳೆಂಬ ವಿಸ್ತಾರವಾದ ಮಹಾವೃಕ್ಷಕ್ಕೆ ರಸತನ್ಮಾತ್ರೆಯೇ ಮೂಲ ಕಾರಣ. ಈ ರುಚಿಗಳು ಸಂಸಾರಚಕ್ರವು ಮುಂದುವರಿದುಕೊಂಡು ಹೋಗಲು ಕಾರಣವಾಗುತ್ತವೆ.

ಏಕೆಂದರೆ ಈ ರಸಗಳ ಆಸ್ವಾದನೆಯಿಂದ ಆಹಾರಗಳಲ್ಲಿ ಆಸಕ್ತಿ ಹುಟ್ಟಿಕೊಳ್ಳುತ್ತದೆ. ಈ ಆಸಕ್ತಿಯೇ ರಾಗ. ರಾಗದಿಂದ ಅಂಥ ಆಹಾರಪದಾರ್ಥಗಳನ್ನು ಮತ್ತೆ ಮನುಷ್ಯನು ಬೆಳೆಸುತ್ತಾನೆ. ಬೆಳೆದ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ಹೀಗೆ ರಸದ ಕಾರಣದಿಂದ ಸಂಸಾರಚಕ್ರ ಮುಂದುವರಿಯುತ್ತಿರುತ್ತದೆ. ಸಂಸಾರಚಕ್ರವು ಸತತ ತಿರುಗುತ್ತಿರುವಂತೆ ಮಾಡುವಲ್ಲಿ ಒಂದು ಮುಖ್ಯ ಕಾರಣವೆನಿಸಿರುವ ರಸತನ್ಮಾತ್ರೆಯು ಈಗ ಹುಟ್ಟಿಕೊಂಡಿತು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net