ಯಾಳನಹಳ್ಳಿ ಶಾಲೆಗೆ ಬಣ್ಣದ ಸಿಂಗಾರ

22 HRS 02
ಹಿರೀಸಾವೆ ಹೋಬಳಿ ಯಾಳನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿರುವ ಕಲಾವಿದರು.
Published on

ಹಿರೀಸಾವೆ: ಹೋಬಳಿಯ ಯಾಳನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡಗಳಿಗೆ ಬೆಂಗಳೂರಿನ ಅವ್ಯಂಗ್ ಫೌಂಡೇಷನ್ ವತಿಯಿಂದ ಬಣ್ಣದ ಲೇಪನ ಹಾಗೂ ರಂಗುರಂಗಿನ ಚಿತ್ತಾರ ಬರೆಯುವ ಕಾರ್ಯ ನಡೆಯುತ್ತಿದೆ.

ಅಂಗನವಾಡಿ ಸೇರಿದಂತೆ ಶಾಲೆಯು ಮೂರು ಕಟ್ಟಡಗಳನ್ನು ಹೊಂದಿದೆ. ಎಲ್ಲ ಗೋಡೆಗಳು, ಕಿಟಕಿ ಹಾಗೂ ಬಾಗಿಲುಗಳಿಗೆ ಬಣ್ಣ ಬಳಿಯಲಾಗಿದ್ದು. ನಂತರ ಕಲಾವಿದರು ಗೋಡೆಗಳ ಮೇಲೆ ಪರಿಸರ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ-ಸಂಸ್ಕಾರ ಸೇರಿದಂತೆ ಆಕರ್ಷಣೀಯ ಚಿತ್ತಾರಗಳನ್ನು ಬಿಡಿಸಿ ಬಣ್ಣ ತುಂಬುವಲ್ಲಿ ಮಗ್ನರಾಗಿದ್ದಾರೆ.

ಫೌಂಡೇಷನ್ ಸಂಸ್ಥಾಪಕಿ ಅಶ್ವಿನಿ ರಾಜನ್ ಮಾತನಾಡಿ, ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬಣ್ಣದಿಂದ ಸಿಂಗಾರಗೊಳಿಸುವುದು, ಪಠ್ಯ ಹಾಗೂ ಪಠ್ಯೇತರ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿಯುತಿದ್ದು ಬಾಗಿಲು ಮುಚ್ಚುವ ಹಂತ ತಲುಪಿವೆ. ಈಗಾಗಲೇ ರಾಜ್ಯಾದ್ಯಂತ ಬಹುತೇಕ ಶಾಲೆಗಳು ಬಾಗಿಲು ಮುಚ್ಚಿವೆ. ಇದರಿಂದ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಬಣ್ಣ ಬಣ್ಣದ ಚಿತ್ತಾರದಿಂದ ಸಿಂಗಾರಗೊಳಿಸುವುದರ ಜತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ಓದು ಹಾಗೂ ಕ್ರೀಡೆಗೆ ಸಂಬಂಧಪಟ್ಟಂತೆ ವಸ್ತುಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜತೆಗೆ ಫೌಂಡೇಷನ್ ವತಿಯಿಂದ ಪ್ರತಿದಿನ ಒಂದು ಗಂಟೆ ಆನ್‌ಲೈನ್ ಮೂಲಕ ಉಚಿತವಾಗಿ ಇಂಗ್ಲಿಷ್ ಹಾಗೂ ಹಿಂದಿ ಬಾಷೆಯಲ್ಲಿ ಟ್ಯೂಷನ್ ನೀಡಲು ಯೋಜನೆ ರೂಪಿಸಿದ್ದು ಬೇಸಿಗೆ ರಜೆಯಲ್ಲಿ ಪ್ರಾರಂಭಿಸಲಾಗುವುದು. ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಲ್ಲದೆ ಫೌಂಡೇಷನ್ ಮೂಲಕ ನಿರ್ಗತಿಕರನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಹಾಗೂ ಗೌರಿಬಿದನೂರಿನಲ್ಲಿ ಅನಾಥಾಶ್ರಮ ತೆರೆದಿದ್ದು 45ಕ್ಕೂ ಹೆಚ್ಚು ಅನಾಥರನ್ನು ನೋಡಿಕೊಳ್ಳಲಾಗುತ್ತಿದೆ ಎಂದರು.

ಸದ್ಯ ಯಾಳನಹಳ್ಳಿ ಶಾಲೆಗೆ ರಂಗ್ 4ಎ ಕಾಸ್ ಸಂಸ್ಥೆಯ 20 ಕಲಾವಿದರ ಸಹಯೋಗದಲ್ಲಿ ಬಣ್ಣ ಬಳಿದು ಚಿತ್ರ ಬಿಡಿಸುವ ಕಾರ್ಯ ನಡೆಯುತಿದ್ದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಾಲೂಕಿನ ಆಯ್ದ ಶಾಲೆಗಳಲ್ಲಿ ಪೇಂಟಿಂಗ್ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಣ್ಣ ಬಳಿದು ಚಿತ್ರ ಬಿಡಿಸುವ ಕೆಲಸ ಮುಂದುವರಿಯಲಿದೆ. ಫೌಂಡೇಷನ್‌ನ ಸಹ ಸಂಸ್ಥಾಪಕಿ ಶ್ವೇತಾ, ನಿರ್ದೇಶಕ ಮಧು, ರಂಗ್ 4 ಎ ಕಾಸ್ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ, ಬಣ್ಣದ ದಾನಿಗಳಾದ ಎಸ್‌ಬಿಎಸ್ ಕನ್‌ಸ್ಟ್ರಕ್ಷನ್ ಮಾಲೀಕ ಶಿವಪ್ರಸಾದ್(ದ್ವಾರಕಿ) ಮುಖ್ಯಶಿಕ್ಷಕ ಶಾಂತಪ್ಪ, ಸಹಶಿಕ್ಷಕಿ ಶ್ರುತಿ, ಎಸ್‌ಡಿಎಂಸಿ ಅಧ್ಯಕ್ಷೆ ಆಶಾ ದಿನೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net