ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ: ಇಬ್ಬರು ಉಗ್ರರ ಸಾವು

Army
Published on

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ ಉಗ್ರರನ್ನು ಸದೆಬಡಿಯಲು ನಡೆದ ಸೇನಾ ಕಾರ್ಯಚರಣೆಯಲ್ಲಿ ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮರಾದರೆ, ಸೇನಾಪಡೆಯ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಶನಿವಾರ ರಾತ್ರಿ ಕುಪ್ವಾರಾದಲ್ಲಿ ಘಟನೆ ನಡೆದಿದೆ. ಕರ್ನಲ್ ಅಶುತೋಷ್ ಶರ್ವ, ಮೇಜರ್ ಅನುಜ್ ಸೂದ್, ಸೇನಾ ಸಿಬ್ಬಂದಿ ನಾಯ್್ಕ ರಾಜೇಶ್, ಲ್ಯಾನ್ಸ್ ನಾಯ್್ಕ ದಿನೇಶ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಶಕೀಲ್ ಕಾಜಿ ಮೃತರು.

ನಾಗರಿಕರ ಒತ್ತೆಸೆರೆ: ರಾಜಧಾನಿ ಶ್ರೀನಗರದಿಂದ 70 ಕಿಮೀ ದೂರವಿರುವ ಹಂದ್ವಾರದ ಚಂಗಿಮುಲ್ಲಾ ಎಂಬಲ್ಲಿ ಒಂದು ಮನೆಯ ನಿವಾಸಿಗಳನ್ನು ಭಯೋತ್ಪಾದಕರು ಒತ್ತೆಸೆರೆ ಇರಿಸಿಕೊಂಡಿದ್ದರು. ಬೇಹುಗಾರಿಕಾ ದಳದ ಮಾಹಿತಿ ಆಧಾರದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಯೋತ್ಪಾದಕರ ವಶದಲ್ಲಿರುವ ಪ್ರದೇಶವನ್ನು ತೆರವುಗೊಳಿಸಿ ನಾಗರಿಕರನ್ನು ರಕ್ಷಿಸಲು ಸೇನೆ ಮತ್ತು ಪೊಲೀಸ್​ನ ಐವರು ಸದಸ್ಯರ ತಂಡ ರಚಿಸಲಾಗಿತ್ತು. ಗುರಿಯನ್ನು ತಲುಪಿ ಒತ್ತೆ ಸೆರೆಯಿದ್ದ ನಾಗರಿಕರನ್ನು ರಕ್ಷಿಸಲು ತಂಡ ಯಶಸ್ವಿಯಾಯಿತು. ಆದರೆ ಉಗ್ರರು ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದ್ದರಿಂದ ಐವರೂ ಹತರಾದರು. ಈ ಸಂದರ್ಭ ನಡೆದ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟರು ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಹಂದ್ವಾರ ದಲ್ಲಿ ನಡೆದ ಕಾರ್ಯಾಚರಣೆ ಜನರ ಜೀವಗಳನ್ನು ಸಂರಕ್ಷಿಸುವ ಭದ್ರತಾ ಪಡೆಗಳ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. | ಬಿಪಿನ್ ರಾವತ್ ಸೇನಾ ಪಡೆಗಳ ಜಂಟಿ ಮುಖ್ಯಸ್ಥ (ಸಿಡಿಎಸ್)

ಪ್ರಧಾನಿ ಸಂತಾಪ

ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಸೇನಾನಿಗಳ ಶೌರ್ಯ ಮತ್ತು ತ್ಯಾಗವನ್ನು ದೇಶ ಎಂದೂ ಮರೆಯುವುದಿಲ್ಲ ಎಂದಿದ್ದಾರೆ. ‘ಹಂದ್ವಾರದಲ್ಲಿ ಹುತಾತ್ಮರಾದ ಸೈನಿಕರು ಮತ್ತು ಭದ್ರತಾ ಪಡೆಯ ವೀರ ಸಿಬ್ಬಂದಿಗೆ ನಮನಗಳು. ಅವರು ತೀರಾ ಸಮರ್ಪಣಾ ಮನೋಭಾವದಿಂದ ದೇಶ ಸೇವೆ ಮಾಡಿದ್ದಾರೆ. ನಮ್ಮ ನಾಗರಿಕರನ್ನು ರಕ್ಷಿಸಲು ದಣಿವಿಲ್ಲದೆ ದುಡಿದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.ಇಬ್ಬರು ಹಿರಿಯ ಸೇನಾಧಿಕಾರಿಗಳ ಸಹಿತ ಐವರ ಸಾವಿನಿಂದ ‘ತುಂಬಾ ನೋವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧದ ಕಾಳಗದಲ್ಲಿ ಅಪ್ರತಿಮ ಶೌರ್ಯ ಮೆರೆದಿದ್ದಾರೆ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಸೇನಾಪಡೆ ಹಾಗೂ ಪೊಲೀಸ್ ಅಧಿಕಾರಿಗಳ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net