ಜ್ಯೋತಿರ್ಲಿಂಗ; ‘ವೇಸ’, ‘ದೇಸ’ ಮತ್ತು ‘ಬಾಸೆ’

Jyotirlinga
Published on

ವೇಸ ಗುರಿಯಾಗಿ ಕೆಟ್ಟವರ ಕಂಡೆ

ದೇಸ ಗುರಿಯಾಗಿ ಕೆಟ್ಟವರ ಕಂಡೆ

ಬಾಸೆ ಗುರಿಯಾಗಿ ಕೆಟ್ಟವರ ಕಂಡೆ

ನೀವು ಗುರಿಯಾಗಿ ಕೆಟ್ಟವರ

ನಾನಾರನೂ ಕಾಣೆ ಕಾಣೆ ಗುಹೇಶ್ವರಾ

(ಎಸ್. ಶಿವಣ್ಣನವರು ಒದಗಿಸಿದ ಸಂಗ್ರಹದಿಂದ; ಆಕರ: ಓ 1211, ವಚನ ವಾಙ್ಮಯ ಭಾಂಡಾರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ)

ಮೇಲ್ನೋಟಕ್ಕೇ ತೋರುವಂತೆ ಪ್ರಸ್ತುತ ವಚನದ ಪ್ರತಿಪಾದನೆಯಲ್ಲಿ ಎರಡು ತುದಿಗಳಿವೆ. ಒಂದು ತುದಿಯಲ್ಲಿ ‘ಕೆಟ್ಟವರು’ ಇದ್ದಾರೆ; ಇನ್ನೊಂದು ತುದಿಯಲ್ಲಿ ‘ಕೆಡದವ’ರಿದ್ದಾರೆ. ಈ ಎರಡು ತುದಿಗಳ ನಡುವಿನ ಮುಖಾಮುಖಿಯಲ್ಲೇ ವಚನದ ಪ್ರತಿಪಾದನೆಯ ಹೆಣಿಗೆಯೂ ಇದೆ.

ಕೆಟ್ಟವರ ಬಗೆಗಿನ ನಿರೂಪಣೆಯಲ್ಲಿ ಅವರ ಕೆಡುವಿಕೆಗೆ ಕಾರಣಗಳನ್ನು ಗುರುತಿಸಲಾಗಿದೆ. ಅವರು ‘ವೇಸ ಗುರಿಯಾಗಿ ಕೆಟ್ಟವರು’, ‘ದೇಸ ಗುರಿಯಾಗಿ ಕೆಟ್ಟವರು’ ಮತ್ತು ‘ಬಾಸೆ ಗುರಿಯಾಗಿ ಕೆಟ್ಟವರು’ ಆಗಿದ್ದಾರೆ. ಹೀಗಾಗಿ ಇಲ್ಲಿ ವೇಷ, ದೇಶ ಮತ್ತು ಭಾಷೆಗಳನ್ನು ಗುರಿಯಾಗಿಸಿಕೊಳ್ಳುವುದರಲ್ಲಿಯೇ ಕೆಡುವಿಕೆಯ ಮೂಲವೂ ಇದೆ.

ಕೆಡುವಿಕೆಗೆ ಸಂಬಂಧಿಸಿದಂತೆ ಇಲ್ಲೊಂದು ನಿರ್ಣಯವೇ ಮಂಡನೆಯಾಗುತ್ತಲಿದೆ. ವಚನವೇ ನಿರೂಪಿಸುತ್ತಿರುವಂತೆ ಗುರಿಗಳ ನಡುವಿನ ವ್ಯತ್ಯಾಸದಲ್ಲಿಯೇ ಈ ಕೆಡುವಿಕೆ ಹಾಗೂ ಕೆಡದಿರುವಿಕೆಗಳ ವ್ಯತ್ಯಾಸವೂ ಅಡಕವಾಗಿದೆ. ವೇಷ, ದೇಶ ಮತ್ತು ಭಾಷೆಗಳನ್ನು ಗುರಿಯಾಗಿಸಿಕೊಳ್ಳುವುದು ವಚನದ ಅಸಮ್ಮತಿಗೆ ಕಾರಣವಾಗಿದೆ. ಅವುಗಳ ಮೂಲಕವೇ ಅದು ಲೋಕದ ವಿವರಗಳನ್ನು ಕಟ್ಟುತ್ತಲಿದೆ. ಹಾಗೆ ಕಟ್ಟುತ್ತಿರುವ ಲೋಕದಲ್ಲಿ ಇವುಗಳು ತಮ್ಮಷ್ಟಕ್ಕೇ ಗುರಿಯಾಗದೆ ದಾರಿಗಳಾಗಬೇಕಾಗಿದ್ದಿತು ಎಂಬ ಒಂದು ಸೂಚನೆಯೂ ಸಾಂರ್ದಭಿಕವಾಗಿ ನಿಷ್ಪನ್ನವಾಗುತ್ತದೆ.

ಬೇಕಿರಲಿ, ಬೇಡದಿರಲಿ, ವೇಷ-ದೇಶ-ಭಾಷೆಗಳು ಲೋಕದ ಅಸ್ತಿತ್ವದ ಭಾಗವೇ ಆಗಿವೆ. ಅಥವಾ, ಹಾಗೆ ನೋಡಿದರೆ, ಲೋಕವು ಲೋಕವಾಗಿ ತನ್ನನ್ನು ಪ್ರಕಟಿಸಿಕೊಳ್ಳುವುದೇ ವೇಷ-ದೇಶ-ಭಾಷೆಗಳ ‘ಮೂಲಕ’ ಎಂದೂ ಹೇಳಬಹುದಾಗಿದೆ. ಈ ದೃಷ್ಟಿಯಿಂದ ಅವು ಲೋಕದ ಅಸ್ತಿತ್ವದ ಸಹಜತೆಗಳೂ ಆಗಿವೆ. ಇವು ಹಾಗೆ ಸಹಜತೆಗಳಾಗಿದ್ದಾಗ ಸರ್ವಸಾಮಾನ್ಯತೆಯಲ್ಲಿ ತಮ್ಮನ್ನು ತಾವು ಕರಗಿಸಿಕೊಳ್ಳುತ್ತಲೂ ಇರುತ್ತವೆ.

ಆದರೆ ವಚನದ ಆಕ್ಷೇಪ ಪ್ರಾರಂಭವಾಗುವುದೇ ಬಹುಶಃ ಇದರ ಮುಂದಿನ ಹಂತದಿಂದ ಎಂದು ಕಾಣುತ್ತದೆ. ಯಾವುವು ದಾರಿಯಲ್ಲಿ ಸುಮ್ಮನೆ ಬಂದುಹೋಗಬೇಕಾಗಿದ್ದವೋ ಅವು ಈಗ ಗುರಿಗಳಾಗಿ ಸ್ಥಾಪನೆಗೊಳ್ಳುತ್ತಿವೆ. ಹೀಗೆ ಇದರಲ್ಲಿ ಒಂದು ವಿಪರ್ಯಾಸವನ್ನು ವಚನವು ಗುರುತಿಸುತ್ತದೆ.

ವ್ಯಕ್ತಿಗಳಿಗಾಗಿ ವೇಷ-ದೇಶ-ಭಾಷೆಗಳೇ ಹೊರತು ವೇಷ-ದೇಶ-ಭಾಷೆಗಳಿಗಾಗಿ ವ್ಯಕ್ತಿಗಳಲ್ಲ ಎನ್ನುವುದು ವಚನದ ಹಿಂದಿರುವ ಗ್ರಹಿಕೆಯಾಗಿದೆ. ವೇಷ-ದೇಶ-ಭಾಷೆಗಳು ತಮ್ಮ ಸಹಜತೆಯಲ್ಲಿದ್ದಾಗ ವ್ಯಕ್ತಿಯನ್ನು ಸಮುದಾಯದೊಂದಿಗೆ ಕರಗಿಸುತ್ತವೆ. ಅಥವಾ, ಬೇರೊಂದು ರೀತಿಯಲ್ಲಿ ಹೇಳುವುದಾದರೆ, ವ್ಯಕ್ತಿಯ ವೇಷ-ದೇಶ-ಭಾಷೆಗಳು ಅವುಗಳದೇ ಸಾಮುದಾಯಿಕ ಚಹರೆಗಳ ಭಾಗವಾಗಿದ್ದಾಗ ವ್ಯಕ್ತಿಗತ ಅಸ್ತಿತ್ವವು ಸಾಮುದಾಯಿಕ ಅಸ್ತಿತ್ವದೊಂದಿಗೆ ಸಮನ್ವಯಗೊಳ್ಳುವಂತಾಗುತ್ತದೆ.

ಆದರೆ ವೇಷ-ದೇಶ-ಭಾಷೆಗಳು ತಮ್ಮಷ್ಟಕ್ಕೇ ಗುರಿಯಾಗುವುದೆಂದರೆ ಅದು ಮೇಲಿನ ಸನ್ನಿವೇಶಕ್ಕೆ ವ್ಯತಿರಿಕ್ತವಾದುದೇ ಆಗಿದೆ. ಇಲ್ಲಿ ಅವುಗಳನ್ನು ಸಹಜತೆಗೆ ವಿರುದ್ಧವಾಗಿ ಆರೋಪಿಸಿಕೊಳ್ಳಲಾಗುತ್ತದೆ. ಇಲ್ಲಿ ತನಗಾಗಿ ತನ್ನ ವೇಷದಲ್ಲಿರದೆ ಬೇರೊಂದು ಉದ್ದೇಶಕ್ಕಾಗಿ ವೇಷವನ್ನು ತಾಳಲಾಗುತ್ತದೆ; ತನಗಾಗಿ ತನ್ನ ದೇಶದಲ್ಲಿರದೆ ಬೇರೊಂದು ಉದ್ದೇಶಕ್ಕಾಗಿ ದೇಶವನ್ನು (ಸ್ಥಳವನ್ನು) ಆರಿಸಿಕೊಳ್ಳಲಾಗುತ್ತದೆ; ತನಗಾಗಿ ತನ್ನ ಭಾಷೆಯನ್ನು ಅರ್ಥಾತ್ ಸಹಜ ನುಡಿಯನ್ನು ನುಡಿಯದೆ ಬೇರೊಂದು ಭಾಷೆಯನ್ನು ನುಡಿಯಲಾಗುತ್ತದೆ.

ಹೀಗೆ ಇವುಗಳ ಮೂಲಕ ಬೇರೊಂದು ಲಾಭದ ಅಥವಾ ಸ್ವಹಿತದ ಸಾಧನೆಯಾಗುತ್ತದೆ. ಅಷ್ಟೇ ಅಲ್ಲದೆ ಇದಕ್ಕೆ ಇನ್ನೊಂದು ಮುಖ್ಯವಾದ ಆಯಾಮವೂ ಇದೆ. ಇದರ ಅತಿರೇಕದಲ್ಲಿ ಇಲ್ಲಿ ‘ಗುರಿಯಾದ’ ಇನ್ನೊಂದು ವೇಷವನ್ನೇ ತನ್ನ ವೇಷವೆಂದು ತಿಳಿಯಲಾಗುತ್ತದೆ; ಹಾಗೆಯೇ ‘ಗುರಿಯಾದ’ ದೇಶ-ಭಾಷೆಗಳನ್ನೇ ತನ್ನ ದೇಶ-ಭಾಷೆಗಳೆಂದು ಭ್ರಮಿಸಲಾಗುತ್ತದೆ. ವಚನದ ಪ್ರಕಾರ ‘ತನ್ನ’ ಕೆಡುವಿಕೆಯಲ್ಲಿ ಮಾತ್ರವೇ ಈ ಬಗೆಯ ತಿಳಿವಳಿಕೆಗಳು, ಭ್ರಮೆಗಳು ಸಾಧ್ಯವಾಗುತ್ತವೆ.

ಇಂದು ನಾವು ನಮ್ಮ ಸುತ್ತಲೂ ಸಾವಿರ ಸಾವಿರ ವೇಷ-ದೇಶ-ಭಾಷೆಗಳನ್ನು ಕಾಣುತ್ತಿದ್ದೇವೆ. ಆದರೆ ಇವುಗಳು ಇರುವಿಕೆಗಳೋ ಅಥವಾ ಕೆಡುವಿಕೆಗಳೋ ಎಂಬುದನ್ನು ಅರಿಯಲು ವಚನದ ಕಣ್ಣಿನ ಅಗತ್ಯವಿದೆ. ಏಕೆಂದರೆ ವಚನಕಾರನು ಮಾತ್ರವೇ ಹೀಗೆ ಕೆಟ್ಟವರನ್ನು ಕಾಣಬಲ್ಲವನಾಗಿದ್ದಾನೆ. ಕೆಡದವರನ್ನು ಕಾಣಬೇಕಾದರೆ ಗೊಹೇಶ್ವರನನ್ನು ಗುರಿಯಾದವರನ್ನು ಕಾಣಬೇಕು. ಗೊಹೇಶ್ವರನನ್ನು ಗುರಿಯಾಗಿಸಿಕೊಳ್ಳುವಲ್ಲಿ ತಮ್ಮ ಕೆಡುವಿಕೆಯೂ ಇದೆ. ಅದು ಕೂಡ ಕೆಡದಿರುವವನ ಕಾಣುವಿಕೆಗೆ ಮಾತ್ರವೇ ನಿಲುಕಬಲ್ಲುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net