

ನೀನು ನಿನ್ನ ಬಲದ ಮೂಲಕ ಯಾವ ಯಾವ ಬಗೆಯಲ್ಲಿ ಧರ್ಮದ ಸ್ಥಾಪನೆ ಸಿದ್ಧಿಸಲ್ಪಡುವುದೋ ಆ ಎಲ್ಲ ರೀತಿಯಲ್ಲಿ ನಿರ್ಭಯನಾಗಿ ಕಾರ್ಯವನ್ನು ಎಸಗಬೇಕು. ನಿನಗೆ ಪ್ರಿಯವಾದುದು ಅಥವಾ ಅಪ್ರಿಯವಾದುದು ಯಾವುದು ಎಂಬ ಭೇದವನ್ನು ಎಣಿಸದೆಯೇ; ಕಾಮ, ಕ್ರೋಧಾದಿಗಳನ್ನೆಲ್ಲ ದೂರಕ್ಕೆ ತಳ್ಳಿ ಸಮಸ್ತ ಪ್ರಾಣಿಗಳ ಮೇಲೂ ಸಮಭಾವವನ್ನಿಟ್ಟು ವರ್ತಿಸುವವನಾಗು.
ಲೋಕದಲ್ಲಿ ಯಾವುದೇ ಮನುಷ್ಯನು ಕೂಡ ಧರ್ಮದಂತೆ ನಡೆದುಕೊಳ್ಳುವುದರಲ್ಲಿ ವಿಚಲಿತನಾದರೆ ಅಂಥವನನ್ನು ನೀನು ಸನಾತನ ದೃಷ್ಟಿಯಿಂದ, ನಿನ್ನ ಬಾಹುಬಲದಿಂದಲಾದರೂ ಸರಿ, ಪರಾಜಯಗೊಳಿಸಿ ದಂಡಿಸಿ ಧರ್ಮಪಾಲನೆಯನ್ನು ಮಾಡು. ಹಾಗೆಯೇ ನೀನೂ ಕೂಡ ಕಾಯಾ ವಾಚಾ ಮನಸಾ ತ್ರಿಕರಣಪೂರ್ವಕವಾಗಿ ಕಾರ್ಯಬದ್ಧನಾಗಿ ಈ ಭೂತಲವಾಸಿಯಾದ ಬ್ರಹ್ಮವನ್ನು (ವೇದ) ನಿರಂತರ ರಕ್ಷಿಸುವ ಪ್ರತಿಜ್ಞೆಯನ್ನು ಮಾಡು.
ವೇದದಲ್ಲಿ ಉಲ್ಲೇಖಿಸಿರುವ ದಂಡನೀತಿ ಧರ್ಮದ ಅನುಸಾರ ನಿಶ್ಯಂಕೆಯಿಂದ ಧರ್ಮಪಾಲನೆ ಮಾಡು. ಎಂದೆಂದಿಗೂ ಕೂಡ ಸ್ವಚ್ಛಂದನಾಗಿ ವರ್ತಿಸುವುದಿಲ್ಲ ಎಂದು ಕೂಡ ಪ್ರತಿಜ್ಞೆ ಮಾಡು. ವೇದಾನುಯಾಯಿಗಳಾದ ವಿಪ್ರರು ಸದಾ ವಂದನೀಯರು. ಅದು ನಿನ್ನ ಸ್ಮರಣೆಯಲ್ಲಿ ಜಾಗೃತವಾಗಿರಲಿ. ಈ ಸಂಪೂರ್ಣ ಜಗತ್ತನ್ನು ಧರ್ಮಸಂಕರ-ವರ್ಣಸಂಕರದಿಂದ ಮುಕ್ತವಾಗಿಸುವೆನೆಂದು ಪ್ರತಿಜ್ಞಾಬದ್ಧನಾಗು’ - ಹೀಗೆಂದು ದೇವತೆಗಳು-ಮಹರ್ಷಿಗಳು ಪೃಥುವಿಗೆ ಉಪದೇಶ ಮಾಡಿದರು.
ವೇನಪುತ್ರನಾದ ಪೃಥುವು ಅವರು ಹೇಳಿರುವ ಎಲ್ಲ ಮಾತುಗಳನ್ನು ತಾನು ಶಿರಸಾವಹಿಸಿ ಪಾಲಿಸುವುದಾಗಿ ಪ್ರತಿಜ್ಞೆಗೈದನು. ‘ಹಾಗೆಯೇ ಆಗಲಿ’ ಎಂದು ಹರಸಿದ ಆ ಮಹಾತ್ಮರು, ಕೂಡಲೇ ಜ್ಞಾನಭಂಡಾರವೇ ಆಗಿರುವ ಋಷಿ ಶುಕ್ರಾಚಾರ್ಯನನ್ನು ಪೃಥುವಿಗೆ ಕುಲಪುರೋಹಿತನನ್ನಾಗಿ ಘೊಷಿಸಿದರು. ಅದರ ಜತೆಗೆ ವಾಲಖಿಲ್ಯಗಣ ಮತ್ತು ಸರಸ್ವತಿ ನದಿಯ ತಟವರ್ತಿಯಾಗಿರುವ ಮಹರ್ಷಿಗಳನ್ನು ಪೃಥುವಿಗೆ ಮಂತ್ರಿಗಳಾಗಿ ಕಾರ್ಯಭಾರವನ್ನು ನಿರ್ವಹಿಸಬೇಕೆಂದು ಕೂಡ ನಿರ್ಣಯಿಸಿದರು. ಹೀಗೆ ಪೃಥುವು ಭೂಮಂಡಲದ ಪ್ರಭುವಾಗಿ ನಿಯುಕ್ತನಾದನು.
ಆ ವೇಳೆಗೆ ಅಲ್ಲಿಯ ಭೂಪ್ರದೇಶವೆಲ್ಲವೂ ಅತಿಯಾಗಿ ಗುಡ್ಡ-ಕೊಳ್ಳಗಳಿಂದ ಆವೃತವಾಗಿತ್ತು. ಅಂಥ ಭೂತಲವನ್ನೆಲ್ಲ ಪೃಥುವು ಸಮತಲಗೊಳಿಸಿಕೊಂಡನು. ಆ ಕಾರ್ಯದಲ್ಲಿ ಆತಂಕವುಂಟುಮಾಡಿದ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನೆಲ್ಲ ತನ್ನ ಬಾಣ ಪ್ರಯೋಗಗಳಿಂದ ಒಂದೆಡೆ ರಾಶಿ ಹಾಕಿ ಇಡುತ್ತಿದ್ದನು. ಅದರೆಡೆಯಲ್ಲಿ ವಿಶಾಲವಾದ ಉದ್ದ-ಅಗಲ-ಎತ್ತರದ ಪರ್ವತಶ್ರೇಣಿ ನಿರ್ವಣವಾಯಿತು ಎಂದು ಕೂಡ ಹೇಳಲಾಗಿದೆ.
ವಂಶಾವಳಿಯ ದೃಷ್ಟಿಯಿಂದ ಯೋಚಿಸಿದರೆ ವೇನಪುತ್ರನಾದ ಪೃಥುವು ವಿಷ್ಣುವಿನಿಂದ ಹಿಡಿದು ಎಂಟನೆಯ ತಲೆಮಾರಿನವನು. ಅದು ಹೇಗೆಂದರೆ - ವಿಷ್ಣು, ವಿರಜಾ, ಕೀರ್ತಿಮಾನ್, ಕರ್ದಮ, ಅನಂಗ, ಅತಿಬಲ, ವೇನ, ಪೃಥು - ಹೀಗೆಂದು ಪುರಾಣವು ತಿಳಿಸಿದೆ
ದೇವತೆಗಳು ಹಾಗೂ ಮಹರ್ಷಿಗಳ ಸಮ್ಮುಖದಲ್ಲಿ ಪೃಥುವು ತನ್ನ ಪ್ರತಿಜ್ಞೆಯನ್ನು ಘೋಷಿಸಿದನಷ್ಟೇ. ಆ ನಂತರದಲ್ಲಿ ಸ್ವಯಂ ವಿಷ್ಣು ಭಗವಾನನ ನೇತೃತ್ವದಲ್ಲಿಯೇ ದೇವೇಂದ್ರಾದಿ ದೇವತೆಗಳು, ಮಹರ್ಷಿಗಳು, ವೇದವಿದರಾದ ವಿಪ್ರರು ಎಲ್ಲರೂ ಸೇರಿ ವೇನಸಂಜಾತನಾದ ಪೃಥುವಿಗೆ ‘ರಾಜ’ ಎಂಬ ಪದವಿ ನೀಡಿ ಪಟ್ಟಾಭಿಷೇಕ ವಿಧಿಯನ್ನು ಕೈಗೊಂಡರು. ಯುಧಿಷ್ಠಿರ! ‘ರಾಜ’ ಎಂಬ ಪದವಿಯ ಪ್ರಾರಂಭವು ಈ ಬಗೆಯಲ್ಲಿ ಉಂಟಾಯಿತು.’’ - ಹೀಗೆಂದು ಭೀಷ್ಮನು ಅದರ ಪೂರ್ಣ ಚರಿತ್ರೆಯನ್ನೇ ವಿವರಿಸಿದರು.
ರಾಜಾ ಪೃಥುವಿನ ರಾಜಾಡಳಿತದ ಪ್ರಾರಂಭವೇ ಮಹಿಮಾಯುತವಾಯಿತು. ಸ್ವಯಂ ಭೂದೇವಿ ಹಾಗೂ ಇಂದ್ರದೇವ, ಯಕ್ಷ-ರಾಕ್ಷಸರಾಜನಾದ ಕುಬೇರ ಇವರುಗಳೆಲ್ಲ ರಾಜ್ಯ ಪಟ್ಟಾಭಿಷಿಕ್ತನಾದ ಪೃಥುವಿಗೆ ಅಪಾರ ಧನಕನಕಾದಿ ದ್ರವ್ಯಗಳ ರಾಶಿಯನ್ನೆ ಸುರಿದು ಸನ್ಮಾನಿಸಿದರು. ಸತ್ವಶಾಲಿಯಾದ ಪೃಥುವು ಮನದೊಳಗೆ ಸ್ಮರಿಸಿಕೊಂಡ ಮಾತ್ರದಿಂದಲೇ ಅವನೆಡೆ ಅಶ್ವ-ರಥ-ಗಜಗಳು, ಕೋಟಿಗಟ್ಟಲೆ ಯೋಧರು ಪ್ರಾದುರ್ಭವಿಸಿದರು. ಅವನ ಆಳ್ವಿಕೆಯಲ್ಲಿ ಯಾರು ಕೂಡ ವೃದ್ಧಾಪ್ಯ-ದುರ್ಭಿಕ್ಷ ಆಧಿ-ವ್ಯಾಧಿ ಇತ್ಯಾದಿಗಳಿಂದ ಪೀಡಿತರಾಗದೆ ಮುಕ್ತರಾಗಿದ್ದರು.
ರಾಜನೆಡೆಯಿಂದ ಭದ್ರ ರಕ್ಷಣಾವ್ಯವಸ್ಥೆ ಇದ್ದ ಕಾರಣದಿಂದಾಗಿ ಎಲ್ಲಿಯೂ ಕಳ್ಳಕಾಕರದಾಗಲೀ, ವಿಷಜಂತುಗಳದಾಗಲೀ, ಪ್ರಜಾಕೋಟಿಯಲ್ಲಿ ವ್ಯಾಜ್ಯ-ವೈಷಮ್ಯಗಳಿಗಾಗಲೀ ಅವಕಾಶ ಉಂಟಾಗುತ್ತಿರಲಿಲ್ಲ. ಕಾರಣಾಂತರದಿಂದ ರಾಜಾ ಪೃಥುವು ಸಮುದ್ರದ ಜಲದಲ್ಲಿ ಹೆಜ್ಜೆ ಇಟ್ಟರೆ ತಕ್ಷಣ ಆ ಸಮುದ್ರಜಲವು ಭೂಮಿಯಂತೆಯೇ ಭಾಸವಾಗುತ್ತಿತ್ತು.
ಅವನು ಪ್ರಯಾಣಿಸತೊಡಗಿದಾಗ ಎದುರಾದ ಗುಡ್ಡ ಪರ್ವತಗಳು ಕೂಡ ತಲೆಬಾಗಿ ದಾರಿ ಸುಗಮವಾಗಿ ಮಾಡಿಕೊಡುತ್ತಿದ್ದವು. ಮಹಾತ್ಮನಾಗಿರುವ ಆ ರಾಜನು ಸಂಪೂರ್ಣ ಭೂಮಂಡಲದಲ್ಲೆಲ್ಲ ಧರ್ಮಪ್ರಧಾನತೆಯನ್ನು ಪ್ರತಿಷ್ಠಾಪಿಸಿದನು. ಪೃಥುವು ಸಮಸ್ತ ಪ್ರಜೆಗಳನ್ನು ಕೂಡ ‘ರಂಜಿಸು’ತ್ತಿದ್ದುದರಿಂದಲೇ (ಸಂತೋಷಪಡಿಸುತ್ತಿದ್ದುದರಿಂದಲೇ) ‘ರಾಜ’ ಎಂಬ ಅನ್ವರ್ಥಕ ವಿಶೇಷಣವನ್ನು ಹೊಂದಿ ಪ್ರಸಿದ್ಧನಾದನು.