

ಬೆಂಗಳೂರು: ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಪ್ರಕರಣ ಯಲಹಂಕ ಉಪನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಅಪಘಾತದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೈಕ್‌ನಲ್ಲಿ ಹೋಗುತ್ತಿದ್ದ ಸರವಣ ಎಂಬುವರು ಯಲಹಂಕ ಉಪನಗರ ಹೆರಿಗೆ ಆಸ್ಪತ್ರೆ ಬಳಿ ರಾತ್ರಿ ೧೦.೩೦ ರ ಸುಮಾರಿಗೆ ಏಕಾಏಕಿ ಯೂ ತಿರುವು ಪಡೆಯಲು ಮುಂದಾಗಿದ್ದಾರೆ. ಅದೇ ವೇಳೆಗೆ ಎದುರುಗಡೆಯಿಂದ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದ ಪ್ರವೀಣ್ ಎಂಬುವರು ಸರವಣರ ಬೈಕ್‌ಗೆ ವಾಹನ ಗುದ್ದಿಸಿದ್ದಾರೆ. ಅಪಘಾತದ ತೀವ್ರತೆಗೆ ಅವರಿಬ್ಬರೂ ಮೇಲಕ್ಕೆ ಹಾರಿ ಬಿದ್ದಿದ್ದಾರೆ.
ಗಾಯಾಳುಗಳಾದ ಸರವಣ ಮತ್ತು ಪ್ರವೀಣ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅವರಿಬ್ಬರೂ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಸರವಣ ಅವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ. ಘಟನೆಯಲ್ಲಿ ಎರಡು ಬೈಕ್‌ಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.