ವಿದ್ಯಾರ್ಥಿನಿಯನ್ನು ಕೊಲ್ಲಲು ಪ್ರಯತ್ನಿಸಿದ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಈ ಘಟನೆಯೇ ವಿಚಿತ್ರ...!

Court 10 June 20
Published on

ಹೈದರಾಬಾದ್​: ಬಾಲಕಿಯೋರ್ವಳನ್ನು ಹತ್ಯೆ ಮಾಡಲು ಯತ್ನಿಸಿದ್ದ 19 ವರ್ಷದ ಯುವಕನಿಗೆ ಸ್ಥಳೀಯ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಈ ವ್ಯಕ್ತಿ 2019ರ ಫೆಬ್ರವರಿಯಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಕೊಲೆ ಮಾಡಲು ಪ್ರಯತ್ನಿಸಿದ್ದ. ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ವಿಚಾರಣೆ ನಡೆಸಿದ್ದ, ಮೊದಲ ಹೆಚ್ಚುವರಿ ಮೆಟ್ರೊಪಾಲಿಟಿನ್​ ಸೆಷನ್ಸ್​ ನ್ಯಾಯಾಧೀಶೆ ಸುನೀತಾ ಕುಂಚಾಲಾ ಅವರು ಆರೋಪಿಗೆ 10 ವರ್ಷದ ಕಠಿಣ ಶಿಕ್ಷೆ ವಿಧಿಸಿ ನೀಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, 1500ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.

ಏನಿದು ಘಟನೆ?

2019ರ ಜನವರಿಯಲ್ಲಿ ಈ ವಿದ್ಯಾರ್ಥಿನಿಯ ತಾಯಿ ಪೊಲೀಸರಿಗೆ ಯುವಕನ ವಿರುದ್ಧ ದೂರು ನೀಡಿದ್ದರು. ಈತ ತಮ್ಮ ಮನೆಯ ಸಮೀಪವೇ ಇದ್ದಾನೆ. ಕಾಲೇಜೊಂದರಲ್ಲಿ ಓದುತ್ತಿದ್ದ. ನನ್ನ ಮಗಳೂ ಸಹ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ. ಯುವಕ ಪ್ರತಿದಿನ ನನ್ನ ಮಗಳಿಗೆ ಹಿಂಸೆ ನೀಡುತ್ತಿದ್ದಾನೆ. ಒಂದು ವರ್ಷದಿಂದಲೂ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದು, ಆತನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು. ಆದರೆ ಅವನೀಗ ನನ್ನ ಮಗಳಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ದುಬೆ ಬ್ರಾಹ್ಮಣನೆಂದು ಯೋಗಿ ಸರ್ಕಾರದಿಂದ ಹತ್ಯೆ: ಕಾಂಗ್ರೆಸ್‌ ಆರೋಪ

ಬಳಿಕ ಆ ಯುವಕ ಹಾಗೂ ಆತನ ತಂದೆ ತಾಯಿಯನ್ನು ಸ್ಟೇಶನ್​ಗೆ ಕರೆಸಿದ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದರು. ಅದಾದ ಮೇಲೆ ಕೂಡ ಅವನು ತನ್ನ ಚಾಳಿ ಬಿಟ್ಟಿರಲಿಲ್ಲ. 2019ರ ಫೆಬ್ರವರಿ 6ರಂದು ಹುಡುಗಿಯ ಮೇಲೆ ಚಾಕುವಿನಿಂದ ಹಲ್ಲೆ, ಮಾಡಿ ಕೊಲ್ಲಲು ಪ್ರಯತ್ನಿಸಿದ್ದ. ಈಕೆ ನನ್ನ ವಿರುದ್ಧವೇ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದರಿಂದ ಸಿಟ್ಟಿಗೆದ್ದು ಹತ್ಯೆ ಮಾಡಲು ಯತ್ನಿಸಿದ್ದಾಗಿ ನಂತರ ಪೊಲೀಸರ ಎದುರು ಕೂಡ ಹೇಳಿಕೊಂಡಿದ್ದ.

ಅಂದು ಹುಡುಗಿಯ ತಲೆ, ಕುತ್ತಿಗೆ, ಕೈಗೆಲ್ಲ ತೀವ್ರ ಗಾಯವಾಗಿತ್ತು. ಅವಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಯುವಕನನ್ನು ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರು ಪಡಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net