ಹಾಸ್ಟೆಲ್​ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ವಿದ್ಯಾರ್ಥಿಗಳು ಅರೆಸ್ಟ್​

mobile using
ಸಾಂದರ್ಭಿಕ ಚಿತ್ರ
Published on

ಲಖನೌ: ದೇಸಾದ್ಯಂತ ಸದ್ದು ಮಾಡಿದ್ದ ಉಡುಪಿ ಹಾಸ್ಟೆಲ್​ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಹಾಸ್ಟೆಲ್​ನಲ್ಲಿರುವ ಸಹಪಾಠಿಗಳ ಖಾಸಗಿ ಫೋಟೋ ಹಾಗೂ ವಿಡಿಯೋವನ್ನೂ ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿ ವಿದ್ಯಾರ್ಥಿನಿಯೋರ್ವಳು ಅದನ್ನು ಕಾಲೇಜ್​ ಸೀನಿಯರ್​ಗಳಿಗೆ ಕಳುಹಿಸಿ ಬ್ಲ್ಯಾಕ್​​​​​​ಮೇಲ್​ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮಂತಾಶಾ ಕಜ್ಮಿ ಹಾಗೂ ಮೊಹಮ್ಮದ್​ ಅಮೀರ್​ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಮೊಬೈಲ್​ ಫೋನ್, ಲ್ಯಾಪ್​ಟಾಪ್​ ಹಾಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನೂ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನಲೆ

ಗಾಜಿಪುರದಲ್ಲಿರುವ ಸರ್ಕಾರಿ ಹೋಮಿಯೋಪತಿ ಕಾಲೇಜಿನ ಮೊದಲನೇ ವರ್ಷದ ವಿದ್ಯಾರ್ಥಿನಿ ಮಂತಾಶಾ ಕಜ್ಮಿ ಹಾಸ್ಟೆಲ್​ನಲ್ಲಿ ವಾಸವಿದ್ದ ತನ್ನ ಸಹಪಾಠಿಗಳ ಖಾಸಗಿ ಫೋಟೋ ಹಾಗೂ ವಿಡಿಯೋವನ್ನೂ ಚಿತ್ರೀಕರಿಸಿ ಬಳಿಕ ಅದನ್ನು ಆಕೆಯ ಸೀನಿಯರ್​ ಮೊಹಮ್ಮದ್​ ಅಮೀರ್​ ಎಂಬಾತನಿಗೆ ಕಳುಹಿಸುತ್ತಿದ್ದಳು.

ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಫೋಟೋ ಹಾಗೂ ವಿಡಿಯೋಗಳನ್ನೂ ತೋರಿಸಿ ಬ್ಲ್ಯಾಕ್​ಮೇಲ್​ ಮಾಡಲು ಶುರು ಮಾಡಿದ್ದಾರೆ. ನೊಂದ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

UP MC
ಆರೋಪಿ ಮೊಹಮ್ಮದ್​ ಅಮೀರ್​

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅವರ ಬಳಿ ಇದ್ದ ಮೊಬೈಲ್​ ಫೋನ್, ಲ್ಯಾಪ್​ಟಾಪ್​ ಹಾಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನೂ ವಶಕ್ಕೆ ಪಡೆದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಈ ಇಬ್ಬರು ವಿದ್ಯಾರ್ಥಿನಿಗಳನ್ನೂ ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕಠಿಣ ಶಿಕ್ಷೆ

ವಿಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗಾಜಿಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಓಂವೀರ್​ ಸಿಂಗ್​ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿತ ವಿದ್ಯಾರ್ಥಿಗಳಿಬ್ಬರು ತಮ್ಮ ಮೊಬೈಲ್​ ಫೋನ್​ಗಳನ್ನೂ ಫಾರ್ಮ್ಯಾಟ್​ ಮಾಡಿದ್ದಾರೆ.

ಈ ಸಂಬಂಧ ಅಧಿಕಾರಿಗಳು ತಂಡ ಅಳಿಸಿಹೋಗಿರುವ ಡೇಟಾ ರಿಟ್ರೈವ್​ ಮಾಡುವುದರಲ್ಲಿ ನಿರತವಾಗಿದ್ದು, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಗಾಜಿಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಓಂವೀರ್​ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net