

ಕೆ.ಆರ್.ನಗರ : ವಿದ್ಯಾರ್ಥಿಗಳು ಕಲಿಕೆಯ ಅವಧಿಯ ಅಮೂಲ್ಯ ಕ್ಷಣಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಪರಿಶ್ರಮದಿಂದ ಸಾಧನೆ ಮಾಡಿದರೆ ಉತ್ತಮ ಫಲ ಲಭಿಸುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಗುರಿ ಸಾಧನೆಯತ್ತ ವಿದ್ಯಾರ್ಥಿಗಳು ಸಾಗಬೇಕು. ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ರೂಢಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಪಾಲಕರ ಆಶಯ ಈಡೇರಿಸಬೇಕೆಂದು ಸಲಹೆ ನೀಡಿದರು.
ಮೊಬೈಲ್ ಫೋನ್ ಬಳಕೆಯಿಂದ ಸಾಧ್ಯವಾದಷ್ಟು ದೂರ ಇರಬೇಕು ಎಂದು ಸಲಹೆ ನೀಡಿದ ಅವರು, ಗುರುಗಳ ಮಾರ್ಗದರ್ಶನದಲ್ಲಿ ಈ ಕಾಲೇಜು ರಾಜ್ಯಕ್ಕೆ ಮಾದರಿಯಾಗುವಂತೆ ಸಾಧನೆ ಮಾಡಬೇಕು ಎಂದರು. ಇನ್ನೆರಡು ದಿನಗಳಲ್ಲಿ ಕಾಲೇಜು ಆವರಣದಲ್ಲಿ ಕೊಳವೆ ಬಾವಿ ಕೊರೆಸುವುದರ ಜತೆಗೆ ಶೌಚಗೃಹ ಕಾಮಗಾರಿಗೆ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಘೋಷಿಸಿದರು.
ಜಗತ್ತನ್ನೇ ಜಯಿಸುವ ಸಂಕಲ್ಪ ಮಾಡಿ: ಗದಗ ಜಿಲ್ಲೆಯ ರೋಣ ತಾಪಂ ಇಒ ರವಿ ಮಾತನಾಡಿ, ದೇಶ ಮತ್ತು ಕುಟುಂಬವನ್ನು ಸುಭದ್ರವಾಗಿ ಹಿಡಿದಿಟ್ಟುಕೊಂಡು ಸರಿ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಇರುವುದು ಸ್ತ್ರೀಯರಿಗೆ ಮಾತ್ರ. ಹಾಗಾಗಿ ವಿದ್ಯಾರ್ಥಿನಿಯರಿ ಪ್ರೇರಣಾ ಶಕ್ತಿಯಿಂದ ಜಗತ್ತನ್ನೇ ಜಯಿಸುವ ಸಂಕಲ್ಪ ಮಾಡಬೇಕು ಎಂದರು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಉಪನ್ಯಾಸಕ ಡಿ. ಶ್ರೀನಿವಾಸ್ ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದರು. ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಪ್ರಾಂಶುಪಾಲ ಎಚ್.ಕೆ. ಕೃಷ್ಣಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಕೆ.ಬಿ. ಸುನೀತಾ ರಮೇಶ್, ಉಪನ್ಯಾಸಕರಾದ ಕೆ.ಚಂದ್ರಶೇಖರ್, ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್ ಇತರರು ಹಾಜರಿದ್ದರು.