

ನಾಡಿಯಾಡ್: ಡ್ರೈವರ್ನ ಹುಚ್ಚು ಧೈರ್ಯದಿಂದಾಗಿ ಕಾಲೇಜು ಬಸ್ಸೊಂದು ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡಿರುವ ಘಟನೆ ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾಡ್ ಪ್ರದೇಶದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಭಾರೀ ಮಳೆಯಿಂದಾಗಿ ನಗರದಾದ್ಯಂತ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ವಿವಿಧ ಭಾಗಗಳಲ್ಲಿ ಜಲಾವೃತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರವಾಹಕ್ಕೆ ಒಳಗಾದ ನಾಡಿಯಾಡ್ನ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದರೂ ಬಸ್ ಡ್ರೈವರ್ ಅಪಾಯವನ್ನು ಲೆಕ್ಕಿಸದೇ ಹುಚ್ಚು ಧೈರ್ಯದಿಂದ ಬಸ್ನ್ನು ಹಾಗೇ ಚಲಾಯಿಸಿಕೊಂಡು ಹೋಗಿದ್ದಾನೆ.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ರನ್ನು ಕಾಮಿಡಿ ಕಿಲಾಡಿ ಎನ್ನುವುದು ಇದೇ ಕಾರಣಕ್ಕೆ: ಕಾಂಗ್ರೆಸ್ ಟಾಂಗ್
ಈ ವೇಳೆ ಬಸ್ ಅಂಡರ್ ಪಾಸ್ನಲ್ಲಿಯೇ ಸಿಲುಕಿದ್ದು ಕೂಡಲೇ ಸ್ಥಳೀಯರು ತಕ್ಷಣ ಸಹಾಯಕ್ಕಾಗಿ ಧಾವಿಸಿ, ತುರ್ತು ಕಿಟಕಿಗಳ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ವಿದ್ಯಾರ್ಥಿಗಳ ಪ್ರಾಣವನ್ನು ಲೆಕ್ಕಿಸದೇ ಬಸ್ ಚಲಾಯಿಸಿದ ಡ್ರೈವರ್ನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬಿಪರ್‌ಜಾಯ್ ಚಂಡಮಾರುತದ ಪರಿಣಾಮದಿಂದಾಗಿ ಗುಜರಾತ್ನಲ್ಲಿ ಲಕ್ಷಗಟ್ಟಲೆ ಜನಜೀವನ ನಿರಾಶ್ರಿತರಾಗಿದ್ದು ಮತ್ತು ವಿದ್ಯುತ್ ಇಲ್ಲದೇ ಸಾವಿರಾರು ಹಳ್ಳಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಈ ನಡುವೆ ಗುಜರಾತ್ನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಇದು ಕೆಲವು ಜಿಲ್ಲೆಗಳಲ್ಲಿ ಪ್ರವಾಹವನ್ನು ಸೃಷ್ಟಿಸಿದೆ.(ಏಜೆನ್ಸೀಸ್)