

ಶೀಘ್ರದಲ್ಲೇ ನಟ-ನಟಿಯರಿಗೂ ಪೊಲೀಸರು ನೋಟಿಸ್ ಜಾರಿ!
ಬೆಂಗಳೂರು: ಸಹ ಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ನಟ ಮಡೆನೂರು ಮನು ಬಂಧನ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು, ಕಳೆದ ೩೧ ತಿಂಗಳಲ್ಲಿ ನಡೆದಿರುವ ಸಾವಿರಾರು ವಾಟ್ಸ್ ಆ್ಯಪ್ ಸಂದೇಶಗಳನ್ನು ಸಂಗ್ರಹಿಸಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇನ್ನು ಇಬ್ಬರ ನಡುವಿನ ಆಡಿಯೋ-ವಿಡಿಯೋ ಸಂಭಾಷಣೆ ವೇಳೆ ಕೆಲ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ-ನಟಿಯರ ಹೆಸರುಗಳು ಪ್ರಸ್ತಾಪವಾಗಿರುವುದರಿಂದ ಶೀಘ್ರದಲ್ಲೇ ಆ ನಟ-ನಟಿಯರಿಗೂ ಪೊಲೀಸರು ನೋಟಿಸ್ ಜಾರಿಗೊಳಿಸಿ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.
೪ ಮೊಬೈಲ್ ಎ್ಎಸ್‌ಎಲ್‌ಗೆ ರವಾನೆ:
ಸಂತ್ರಸ್ತೆ ಹಾಗೂ ಆರೋಪಿಯ ತಲಾ ಎರಡು ಸೇರಿ ಒಟ್ಟು ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಮನು ವಿಚಾರಣೆ ಮುಂದುವರಿಸಿರುವ ಪೊಲೀಸರು ಆತನ ಹೇಳಿಕೆ ದಾಖಲಿಸುತ್ತಿದ್ದಾರೆ. ಸಂತ್ರಸ್ತೆಯ ದೂರು ಆಧರಿಸಿ ಆರೋಪಿಯನ್ನು ಕರೆದೊಯ್ದು ಈಗಾಗಲೇ ಸ್ಥಳ ಮಹಜರು ನಡೆಸಿದ್ದಾರೆ. ಈ ನಡುವೆ ಇಬ್ಬರ ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಸಂತ್ರಸ್ತೆ ತನ್ನ ದೂರಿನಲ್ಲಿ ಮನು ತನ್ನ ಮೇಲೆ ಅತ್ಯಾಚಾರ ಮಾಡುವುದನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ, ಮನು ಮೊಬೈಲ್‌ಗಳಲ್ಲಿ ಆ ರೀತಿಯ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ. ಹೀಗಾಗಿ ತನ್ನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಆ ವಿಡಿಯೋಗಳನ್ನು ಡಿಲೀಡ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ಡಿಲೀಟ್ ಮಾಡಿರುವ ಡೇಟಾ ರಿಡ್ರೈವ್ ಮಾಡಲು ಮೊಬೈಲ್‌ಗಳನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ.
ಮನುವಿನ ಮತ್ತೊಂದು ಆಡಿಯೋ ವೈರಲ್:
ಸಂತ್ರಸ್ತೆ ಜತೆ ಸಂಬಂಧವಿದ್ದು, ಆಕೆಯನ್ನು ಮದುವೆಯಾಗಿರುವುದಾಗಿ ಆರೋಪಿ ಮನು ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾನು ಆಕೆಯನ್ನು ಮದುವೆಯಾಗಿದ್ದಾನೆ. ಎಲ್ಲಿ ಬೇಕಾದರೂ ಈ ಮಾತನ್ನು ಹೇಳುತ್ತೇನೆ. ಆಕೆ ನನ್ನ ಹೆಂಡತಿ. ನಾನು ಆಕೆಗೆ ಏನು ಬೇಕಾದರೂ ಮಾಡುತ್ತೇನೆ. ಗಂಡ-ಹೆಂಡತಿ ವಿಚಾರದಲ್ಲಿ ಯಾರೂ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಸೇರಿದಂತೆ ಇನ್ನಿತರ ಮಾತುಗಳನ್ನು ಮನು ಆ ಆಡಿಯೋದಲ್ಲಿ ಹೇಳಿದ್ದಾನೆ.