

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ಮುಗಿದು ನಾಲ್ಕು ತಿಂಗಳು ಕಳೆದಿದ್ದರೂ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿಲ್ಲ. ವಿವಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅಸಮಾಧಾನ ವ್ಯಕ್ತಪಡಿಸಿದರು.
ಏ.11ರಂದು ಪಿಯು ಫಲಿತಾಂಶ ಪ್ರಕಟವಾಗಿದ್ದರೂ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ. ವಿವಿ ವ್ಯಾಪ್ತಿಯ 84 ಕಾಲೇಜುಗಳಲ್ಲಿ ಪ್ರವೇಶಾತಿ ಮುಗಿದು ತರಗತಿಗಳು ಆರಂಭವಾಗಬೇಕಿತ್ತು. ಸ್ನಾತಕೋತ್ತರ ತರಗತಿಗಳೂ ಆರಂಭವಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಕ್ಕಳ ವ್ಯಾಸಂಗದ ಕತೆಯೇನು ಎಂದು ಪಾಲಕರು ಆತಂಕದಲ್ಲಿದ್ದಾರೆ. ಕುವೆಂಪು ವಿವಿ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೊಂದೆಡೆ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಿಲ್ಲ. ಮೌಲ್ಯಮಾಪನದಲ್ಲಿ ಪಾಲ್ಗೊಂಡ ಅಧ್ಯಾಪಕರಿಗೂ ವೇತನ ನೀಡಿಲ್ಲ. ರಾಜ್ಯದ ವಿವಿಗಳಲ್ಲಿ ಕುವೆಂಪು ವಿವಿ ಕೊನೆಯ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.