ಹಿಂಗಾರು ಬಳಿಕ ರಾಜ್ಯದಲ್ಲಿ ಚಳಿ ಜೋರು; ಹಲವೆಡೆ ಕನಿಷ್ಠ ತಾಪಮಾನ ಕುಸಿತ

Severe Cold
Published on

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಕ್ಷೀಣಿಸಿದ ಬೆನ್ನಲ್ಲೇ ಚಳಿ ಹೆಚ್ಚುತ್ತಿದೆ. ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಭೂಮಿಯಲ್ಲಿ ತೇವಾಂಶ ಹೆಚ್ಚಳ, ಮೋಡ ಕವಿದ ವಾತಾವರಣ, ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದು ಸೇರಿ ವಿವಿಧ ಕಾರಣಗಳಿಂದಾಗಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಳಿತವಾಗಿ ಚಳಿ ಹೆಚ್ಚಾಗಿದೆ.

ಎಲ್ಲೆಲ್ಲಿ ಕನಿಷ್ಠ ತಾಪಮಾನ?: ಗುರುವಾರ ಹರದನಹಳ್ಳಿಯಲ್ಲಿ 12.2 ಡಿಗ್ರಿ ಸೆ., ಬೀದರ್ 12.5, ವಿಜಯಪುರ 13, ಧಾರವಾಡ ಮತ್ತು ಬೆಂಗಳೂರು 13.6 ಮತ್ತು ಮಂಡ್ಯದಲ್ಲಿ 14 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆ, ಹೊನ್ನಾವರ, ಮಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ 2-3 ಡಿ.ಸೆ. ಇಳಿಮುಖವಾಗಿದೆ.

ಕಲ್ಯಾಣದಲ್ಲೇ ಹೆಚ್ಚು: ಬೆಂಗಳೂರಿಗಿಂತ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಿದೆ. ವಿಜಯಪುರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದೆ. ಸಂಜೆ, ಮುಂಜಾನೆ ಇಬ್ಬನಿ ಬೀಳುತ್ತಿದೆ. ಜತೆಗೆ ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಹೆಚ್ಚು ಚಳಿ ಅನುಭವಾಗುತ್ತದೆ.

ಮಲೆನಾಡು ವ್ಯಾಪ್ತಿಯಲ್ಲಿ 1,950 ಮಿ.ಮೀ. ವರ್ಷಧಾರೆಗೆ ಎದುರಾಗಿ 2,342 ಮಿ.ಮೀ. (ಶೇ.20 ಹೆಚ್ಚಳ), ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 702 ಮಿ.ಮೀ. ಬದಲು 783 ಮಿ.ಮೀ. (ಶೇ.12 ಹೆಚ್ಚಳ), ದಕ್ಷಿಣ ಕರ್ನಾಟಕ ಭಾಗದಲ್ಲಿ 714 ಮಿ.ಮೀ. ಬದಲು 875 ಮಿ.ಮೀ. (ಶೇ.20 ಹೆಚ್ಚಳ) ವರ್ಷಧಾರೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ-ಅಂಶ ಬಹಿರಂಗಪಡಿಸಿದೆ.

ಲಾ-ನಿನಾ ಪರಿಣಾಮ: ‘ಲಾ-ನಿನಾ’ ಕಾರಣದಿಂದ ಈ ಬಾರಿ ಚಳಿ ತುಸು ಹೆಚ್ಚಾಗಿದೆ. ಪೂರ್ವ ಹಾಗೂ ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದರೆ ‘ಲಾ-ನಿನಾ’ ಉಂಟಾಗುತ್ತದೆ. ಅದರ ಪರಿಣಾಮದಿಂದ ಈಶಾನ್ಯ ಮಾರುತ ದುರ್ಬಲಗೊಳ್ಳುತ್ತಿರುವುದು ಚಳಿ ಹೆಚ್ಚಳಕ್ಕೆ ಕಾರಣ. ದಕ್ಷಿಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶ ಏರಿಳಿತವಾಗಿದೆ. ಚಳಿ ಅವಧಿಯಲ್ಲಿ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸಿದರೆ ನೆಗಡಿ, ಕೆಮ್ಮು ಸೇರಿ ಇತರ ಕಾಯಿಲೆಗಳು ಬಾಧಿಸಲಿವೆ. ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ವರ್ಷವಾರು ಮಳೆ ವಿವರ

  • 2024ರ ಜ.1- ಡಿ.31- 1,375 ಮಿ.ಮೀ.
  • 2023ರ ಜ.1-ಡಿ.31- 872 ಮಿ.ಮೀ.
  • 2022ರ ಜ.1-ಡಿ.31-1,477 ಮಿ.ಮೀ.
  • 2021ರ ಜ.1-ಡಿ.31-1,301 ಮಿ.ಮೀ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net