ರಾಜ್ಯದಲ್ಲಿ ಮತ್ತೆ ಥಂಡಿ ವಾತಾವರಣ: ಬೀದರ್‌ನಲ್ಲಿ 7.2 ಉಷ್ಣಾಂಶ ದಾಖಲು

Cold
Published on

ಬೆಂಗಳೂರು: ಮಾಂಡೌಸ್ ಚಂಡಮಾರುತ ಬಂದು ಹೋದ ಬಳಿಕ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದು ಸೇರಿ ಇತರ ಕಾರಣಗಳಿಂದ ರಾಜ್ಯದಲ್ಲಿ ಮತ್ತೆ ಥಂಡಿ ವಾತಾವರಣ ಸೃಷ್ಟಿಯಾಗಿದೆ.

ದಕ್ಷಿಣ ಕರ್ನಾಟಕ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿದೆ. ಭಾನುವಾರ ಬೀದರ್‌ನಲ್ಲಿ 7.2, ವಿಜಯಪುರದಲ್ಲಿ 11.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಗದಗ ಮತ್ತು ಹಂಪೆಯಲ್ಲಿ ಗರಿಷ್ಠ ತಾಪಮಾನದಲ್ಲಿ ತಲಾ 2 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನದಲ್ಲಿ ಬೀದರ್‌ನಲ್ಲಿ 9, ವಿಜಯಪುರ ಮತ್ತು ಬದಾಮಿಯಲ್ಲಿ ತಲಾ 5, ರಾಯಚೂರಿನಲ್ಲಿ 3 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 1-2 ಉಷ್ಣಾಂಶ ಏರಿಳಿತವಾಗುತ್ತಿದೆ.

ಸಾಮಾನ್ಯವಾಗಿ ನವೆಂಬರ್ ಕೊನೇ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿವರೆಗೆ ಇರುತ್ತದೆ. ಸತತ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ತೇವಾಂಶ ಇರುವುದರಿಂದ ವಾಡಿಕೆಗಿಂತ ಮುನ್ನ ಚಳಿ ಶುರುವಾಗಿತ್ತು. ನಂತರ ಹಿಂಗಾರು ಮಳೆ ಕ್ಷೀಣ ಹಾಗೂ ಬಿಸಿಲು ವಾತಾವರಣ ಇದ್ದಿದ್ದ ಪರಿಣಾಮ ಹೆಚ್ಚಾಗಿದ್ದ ಚಳಿ ಕಡಿಮೆಯಾಗಿತ್ತು. ಡಿ.31ಕ್ಕೆ ಹಿಂಗಾರು ಮುಗಿದಿದೆ. ಚಂಡಮಾರುತ ಪ್ರಭಾವ, ಮೋಡ ಕವಿದ ವಾತಾವರಣ ಹಾಗೂ ವಾತಾವರಣದಲ್ಲಿ ತೇವಾಂಶ ಇರುವ ಕಾರಣದಿಂದ ರಾಜ್ಯದಲ್ಲಿ ಮತ್ತೆ ಚಳಿ ಮತ್ತು ಶೀತಗಾಳಿ ಕಾಣಿಸಿಕೊಂಡಿದೆ.

ಉತ್ತರ ಭಾರತದಲ್ಲಿ ಈಗಾಗಲೇ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿತವಾಗಿದೆ. ಉತ್ತರದಿಂದ ದಕ್ಷಿಣ ದಿಕ್ಕಿನತ್ತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ತಣ್ಣನೆ ಗಾಳಿಯೂ ಬೀಸತೊಡಗಿದೆ. ನಾಲ್ಕೈದು ದಿನಗಳಿಂದ ಕೆಲ ಜಿಲ್ಲೆಗಳಲ್ಲಿ ಹಗಲಿನಲ್ಲಿ ಬಿಸಿಲು ಕಡಿಮೆ ಇರುವ ಜತೆಗೆ ಸಂಜೆ-ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಇದರಿಂದ ಚಳಿಯ ಅನುಭವವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net