ರಾಜ್ಯದಲ್ಲಿ ಮೂರು ದಿನ ಶೀತ ಅಲೆ ಎಚ್ಚರಿಕೆ; 21ರಿಂದ ಮಳೆ ಸಾಧ್ಯತೆ

ವಿಜಯವಾಣಿ (4)
Published on

ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತ ಅಲೆಗಳು (ಕೋಲ್ಡ್ ವೇವ್) ಕಾಣಿಸಿಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ವಾಡಿಕೆಗಿಂತ ಅಧಿಕ ಮಳೆ, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ, ಸೈಕ್ಲೋನ್ ಉಂಟಾಗಿರುವುದು, ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 5-6 ಡಿ.ಸೆ.ಉಷ್ಣಾಂಶ ಇಳಿಕೆಯಾಗಿದೆ.

ಕಲಬುರಗಿ, ವಿಜಯಪುರದಲ್ಲಿ ಡಿ.17ರಿಂದ ಡಿ.19ರವರೆಗೆ ತೀವ್ರ ಶೀತದ ಅಲೆಗಳು ಬೀಸಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ. ಈ ಸಂದರ್ಭದಲ್ಲಿ ತಾಪಮಾನ 6ರಿಂದ 7 ಡಿ.ಸೆ.ದಾಖಲಾಗಲಿದೆ. ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿಯಲ್ಲಿ ಮುಂದಿನ 3 ದಿನ ಶೀತ ವಾತಾವರಣ ಉಂಟಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆ ಜಿಲ್ಲೆಗಳಲ್ಲಿ 10 ಡಿ.ಸೆ.ಉಷ್ಣಾಂಶ ಇರಲಿದೆ. ಇದು ವಾಡಿಕೆಗಿಂತ 4-5 ಡಿ.ಸೆ.ಉಷ್ಣಾಂಶ ಕಡಿಮೆ ಇರಲಿದೆ.

ಮೂರು ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಡಿ.21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ವಿಜಯನಗರದಲ್ಲಿ ಡಿ.21ರಿಂದ ಡಿ.23ರವರೆಗೆ ವರ್ಷಧಾರೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಡಿ.21ರಿಂದ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ.

ಹಿಂದೊಮ್ಮೆ ಬೀದರ್, ವಿಜಯಪುರದಲ್ಲಿ ಕನಿಷ್ಠ ತಾಪಮಾನದಲ್ಲಿ 6 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಇದೀಗ ಆ ಜಿಲ್ಲೆಗಳಲ್ಲಿ 7-8 ಡಿ.ಸೆ.ಉಷ್ಣಾಂಶ ದಾಖಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವ ಕಾರಣ ರಾತ್ರಿ ಬೆಚ್ಚನೆ ವಾತಾವರಣ ಇರುವುದಿಲ್ಲ. ಗರಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ ಉಷ್ಣಾಂಶ ಇಳಿಮುಖವಾದ ಹಿನ್ನೆಲೆಯಲ್ಲಿ ಹಗಲಿನಲ್ಲಿ ಬಿಸಿಲಿನ ಪ್ರಖರತೆ ಅಷ್ಟೇನೂ ಇಲ್ಲ. ಇದರಿಂದಾಗಿ ಚಳಿಯ ತೀವ್ರತೆ ಜಾಸ್ತಿ ಇದೆ. ಡಿ.21ರಿಂದ ರಾತ್ರಿ ವೇಳೆ ಉಷ್ಣತೆ ದಾಖಲಾಗುವ ಕಾರಣ ಚಳಿ ಪ್ರಮಾಣ ತುಸು ಇಳಿಮುಖಬಹುದು. | ಸಿ.ಎಸ್. ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net