ಶಕ್ತಿಕೇಂದ್ರಗಳ ಶೀತಲಸಮರ, ಬಿಜೆಪಿಗೆ ಮುಜುಗರ: ಅಧಿವೇಶನಕ್ಕೆ ವಿಪಕ್ಷ ನಾಯಕನ ಆಯ್ಕೆ ಕ್ಷೀಣ ವೀಕ್ಷಕರಿಂದಲೂ ನೀಗದ ಸಮಸ್ಯೆ

BJP
Published on

ಬೆಂಗಳೂರು: ಪ್ರಮುಖ ಸ್ಥಾನಗಳಿಗೆ ಆಯ್ಕೆ ವಿಚಾರದಲ್ಲಿ ಎರಡು ಪ್ರಬಲ ‘ಶಕ್ತಿ’ಗಳ ಶೀತಲ ಸಮರದಿಂದ ಪ್ರತಿಪಕ್ಷ ಬಿಜೆಪಿ ಮುಜುಗರಕ್ಕೆ ಸಿಲುಕಿದ್ದು, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಕಗ್ಗಂಟಾಗಿದೆ.

ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೊಸ ಸರ್ಕಾರ ಬಂದು ಒಂದೂವರೆ ತಿಂಗಳು, ವಿಧಾನಮಂಡಲ ಅಧಿವೇಶನ ಶುರುವಾಗಿ ನಾಲ್ಕು ದಿನಗಳು ಕಳೆದು, ಸಿಎಂ ಸಿದ್ದರಾಮಯ್ಯ 14ನೇ ಬಾರಿಗೆ ಬಜೆಟ್ ಮಂಡಿಸಿ ಹೊಸ ದಾಖಲೆಯನ್ನೂ ಬರೆದಿದ್ದಾಯ್ತು. ಆದರೆ, ವಿರೋಧ ಪಕ್ಷಕ್ಕೆ ಅಧಿಕೃತ ನಾಯಕರೇ ಇಲ್ಲ.

ವಿಧಾನಸಭೆಯಲ್ಲಿ 66 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಅಧಿಕೃತ ಪ್ರತಿಪಕ್ಷ ಸ್ಥಾನ ನೀಡಲು ಸ್ಪೀಕರ್ ಯು.ಟಿ. ಖಾದರ್ ಸಿದ್ಧರಿರಬಹುದು. ಆದರೆ, ತನ್ನ ನಾಯಕ ಯಾರೆಂಬುದು ತಿಳಿಯದ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಅಯೋಮಯವಾಗಿದೆ.

ಮೂಡದ ಒಮ್ಮತ: ಪ್ರತಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಸಲ್ಲಿಸಿದ ವರದಿಗೆ ಮನ್ನಣೆ ಸಿಗಲಿಲ್ಲ. ವರಿಷ್ಠರ ಸೂಚನೆಯಂತೆ ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಮನ್ಸುಖ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ಸಲ್ಲಿಸಿದ ವರದಿಯಿಂದಲೂ ಸಮಸ್ಯೆ ಬಗೆಹರಿದಿಲ್ಲ. ವಿಫಲಸೂತ್ರಗಳ ನಾಯಕನ ಮಾತಿಗೆ ಮಣೆ ಹಾಕಿದರೆ, ಲೋಕಸಭೆ ಚುನಾವಣೆಯಲ್ಲೂ ಹಿನ್ನಡೆ ನಿಶ್ಚಿತವೆಂಬ ಅಳುಕು ಮುಖಂಡರನ್ನು ಬಾಧಿಸುತ್ತಿದ್ದು, ಯಾರ ಬಳಿ ಹೇಳಿಕೊಳ್ಳಲಾಗದೆ ಕೈಕೈ ಹಿಚುಕಿಕೊಳ್ಳುತ್ತಿದ್ದಾರೆ.

ಉಭಯ ಸದನಗಳ ಪ್ರತಿಪಕ್ಷ ನಾಯಕ, ಮುಖ್ಯಸಚೇತಕ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿಗೆ ಹಂಚುವ ಚಿಂತನೆಗೆ ಒಮ್ಮತ ಮೂಡಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ಹಿಂದುಳಿದ ವರ್ಗ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಕ್ಕಲಿಗರಿಗೆ ನೀಡಿದರೆ ಲಿಂಗಾಯತರ ಸ್ಥಾನಮಾನವೇನು ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತರಿಗೆ ನೀಡುವುದಾದರೆ ಯಾರನ್ನು ಆಯ್ಕೆ ಮಾಡಬೇಕು ? ಎಂಬ ಪ್ರಶ್ನೆ ತಲೆ ಎತ್ತಿದೆ. ಪ್ರತಿಪಕ್ಷ ನಾಯಕನ ಹುದ್ದೆಗೆ ವಿ. ಸುನಿಲ್​ಕುಮಾರ್, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥನಾರಾಯಣ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ. ರವಿ, ಆರ್.ಅಶೋಕ್, ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆ ಹೆಸರುಗಳು ಪ್ರಸ್ತಾಪವಾಗಿದ್ದು, ಪ್ರಭಾವಿ ನಾಯಕರಿಬ್ಬರ ನಡುವೆ ಹೊಂದಾಣಿಕೆಯಿಲ್ಲದ ಕಾರಣ ವರಿಷ್ಠರು ಮೂಕಪ್ರೇಕ್ಷಕರಾಗಿದ್ದಾರೆ.

ವಿಶೇಷ ವ್ಯಕ್ತಿಯನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ದೃಷ್ಟಿಯಿಂದ ವಿಳಂಬವಾಗಿದೆ. ಪಕ್ಷದ ವರಿಷ್ಠರು ಶಾಸಕ ಯತ್ನಾಳ್ ಸೇರಿ ಯಾರನ್ನೇ ವಿಪಕ್ಷ ನಾಯಕನಾಗಿ ಘೊಷಿಸಿದರೂ ಸ್ವಾಗತಿಸುತ್ತೇನೆ. ನಾನು ರಾಜ್ಯಾಧ್ಯಕ್ಷ ಆಗುವುದಿಲ್ಲ. ಪಕ್ಷದ ಸಂಘಟನೆ ಮಾಡುತ್ತೇನೆ. | ಮುರುಗೇಶ ನಿರಾಣಿ ಮಾಜಿ ಸಚಿವ ವಿಪಕ್ಷ ನಾಯಕನ ಸ್ಥಾನಕ್ಕೂ ರೇಟ್ ಫಿಕ್ಸ್ ಆಗಿದೆಯಾ ಯಾರಿಗೆ ಗೊತ್ತು? ಈ ಹಿಂದೆ ಸಿಎಂ ಸ್ಥಾನಕ್ಕೆ 2500 ಕೋಟಿ ಕೊಡಬೇಕೆಂದಿದ್ದರು. | ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ

ಸದ್ಯಕ್ಕೆ ಆಯ್ಕೆ ಕ್ಷೀಣ: ಪಕ್ಷದ ನಾಯಕರು ಬಹಿರಂಗವಾಗಿ ಒಂದು, ಎರಡು ಎಂದು ದಿನಗಣನೆ ಹೇಳಿಕೆ ನೀಡುತ್ತಿದ್ದರೂ ಆಂತರಿಕ ಜಂಜಡ ಬೇರೆಯೇ ಇದೆ. ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಕ್ಕೆ ಅಧಿಕೃತ ನಾಯಕನ ಆಯ್ಕೆ ಕ್ಷೀಣಿಸಿದೆ ಎಂದು ಮೂಲಗಳು ಹೇಳುತ್ತಿವೆ.

ಪ್ರತಿಪಕ್ಷ ನಾಯಕನ ನೇಮಕವಾಗದಿದ್ದರೂ ಸೋಮವಾರದಿಂದ ಬಜೆಟ್ ಮೇಲಿನ ಚರ್ಚೆಯನ್ನು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್​ನಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸಪೂಜಾರಿ ಪ್ರಾರಂಭಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮಳೆ ವಿಳಂಬದಿಂದ ರೈತಾಪಿ ವರ್ಗದ ನೆಮ್ಮದಿಗೆ ಭಂಗ ಉಂಟಾಗಿದೆ. ಕುಡಿಯುವ ನೀರು, ವಿದ್ಯುತ್ ಸೇರಿ ಜನ ಸಮುದಾಯದ ಸಮಸ್ಯೆಗಳಿಗೆ ಗಂಭೀರ ನೆಲೆಯಲ್ಲಿ ಚರ್ಚೆ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಗೊಂದಲಗಳಿಂದ ನಾಯಕನ ಆಯ್ಕೆ ವಿಳಂಬವಾಗಿದ್ದು, ಆಡಳಿತ ಪಕ್ಷದ ಟೀಕೆ-ಟಿಪ್ಪಣಿಗೆ ಆಹಾರವಾಗಿದ್ದೇವೆ. ಸ್ವಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದೇವೆ ಎಂದ ಹಿರಿಯ ನಾಯಕ ತಮ್ಮ ಬೇಸರ ಹೊರಹಾಕಿದ್ದಾರೆ.

ಬಗೆಹರಿಯದ ಸಮಸ್ಯೆ: ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಅಮಿತ ವಿಶ್ವಾಸದಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆಯು ಆಘಾತ ನೀಡಿದೆ. ರಾಜ್ಯ ನಾಯಕರಲ್ಲಿ ಆತ್ಮವಿಶ್ವಾಸದ ಕೊರತೆ, ಕೇಂದ್ರ ನಾಯಕತ್ವದ ಅಸಹಾಯಕತೆ, ಕಾರ್ಯಕರ್ತರ ಸಿಟ್ಟು-ಸೆಡವು ಸೇರಿಕೊಂಡು ಕಮಲಪಡೆಯನ್ನು ಹತಾಶೆಯ ಮಡುವಿಗೆ ತಳ್ಳಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆಯೇ ಹೊರತು ಸತ್ತಿಲ್ಲ. ಸಂಘಟನೆಯಲ್ಲಿ ಚೈತನ್ಯ ತುಂಬಿ ಮತ್ತೆ ಪುಟಿದೇಳುತ್ತೇವೆ ಎನ್ನುವ ನಾಯಕರ ಹೇಳಿಕೆಗಳು ಹುಸಿಯಾಗಿವೆ. ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ನೆಪದಲ್ಲಿ ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸಿ ಕೈ ತೊಳೆದುಕೊಂಡಿದೆ. ಜಾತಿ-ವರ್ಗ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ ಮುಂತಾದ ಮಾನದಂಡಗಳಿಗಿಂತ ಎರಡು ‘ಶಕ್ತಿ’ಗಳ ಮೇಲುಗೈ ಸಾಧಿಸಲು ಹಿಡಿದ ಪಟ್ಟು ಬಿಕ್ಕಟ್ಟಿಗೆ ಮೂಲ ಕಾರಣ. ಬಣಗಾರಿಕೆ ಸುಳಿಗೆ ಸಂಘಟನೆಯು ಸಿಕ್ಕಿ, ಒದ್ದಾಡುತ್ತಿದೆ ಎನ್ನುವುದು ವೇದ್ಯವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net