

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷದ ವಿರುದ್ಧ ಹೊಸ ಅಸ್ತ್ರಗಳನ್ನು ತನ್ನ ಬತ್ತಳಿಕೆಗೆ ಜೋಡಿಸಿಕೊಳ್ಳುತ್ತಿದ್ದರೆ, ಪ್ರತ್ಯಸ್ತ್ರ ಹೂಡಬೇಕಾದ ಪ್ರತಿಪಕ್ಷ ಬಿಜೆಪಿ ಅಂತಃಕಲಹದ ‘ವಿಷಮಶೀತ ಜ್ವರ’ದಿಂದ ಬಳಲುತ್ತಿದೆ.
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿರುದ್ಧ ‘ಮೈಸೂರು ಚಲೋ’ ಪಾದಯಾತ್ರೆಯು ಕೇಸರಿ ಪಡೆಯಲ್ಲಿ ತುಂಬಿದ ಹುರುಪು, ಬಿಜೆಪಿ ಬಗ್ಗೆ ಜನರಲ್ಲಿ ಹೆಚ್ಚಿದ ವಿಶ್ವಾಸವು ಕೆಲವರಿಗೆ ‘ಅಸಂತೋಷ’ ತಂದಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಅತೃಪ್ತರು ‘ದಂಡಯಾತ್ರೆ’ಗೆ ಮುಂದಾಗಿದ್ದರು. ಇದು ವರಿಷ್ಠರ ಕಣ್ಣು ಕೆಂಪಾಗಿಸಿ ಖಡಕ್ ಸಂದೇಶ ರವಾನೆಗೂ ಕಾರಣವಾಯಿತು. ಹೀಗಾಗಿ ವಿಜಯೇಂದ್ರ, ಆರ್.ಅಶೋಕ್ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪಸಿಂಹ ಮತ್ತಿತರರ ಬಹಿರಂಗ ಹೇಳಿಕೆಗಳು ತಗ್ಗಿದವು ಎಂದು ಹೇಳಲಾಗಿತ್ತು.
ಆಂತರಿಕ ಗೊಂದಲ: ‘ಮೈಸೂರು ಚಲೋ’ ಯಶಸ್ಸಿನ ಮಾಹಿತಿ ಪಡೆದಿದ್ದ ದೆಹಲಿ ನಾಯಕರು ಸಂತುಷ್ಟರಾಗಿದ್ದರು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಖುದ್ದು ದೆಹಲಿಗೆ ತೆರಳಿ ವರದಿ ನೀಡಿ, ಮುಂದಿನ ಕಾರ್ಯತಂತ್ರಗಳಿಗೆ ಅಪ್ಪಣೆ ಪಡೆದು ಬಂದಿದ್ದರು. ಆದರೆ, ದೆಹಲಿಯಲ್ಲಿರುವ ‘ಪ್ರಭಾವಿ’ಯೊಬ್ಬರ ತಂತ್ರದಿಂದ ಒಂದು ಬಣ ಮತ್ತೊಂದು ಪಾದಯಾತ್ರೆ ಬಗ್ಗೆ ಪ್ರತ್ಯೇಕ ಸಭೆಯನ್ನು ನಡೆಸಿ ‘ಆಂತರಿಕ ಗೊಂದಲ’ ಚರ್ಚೆ ಹುಟ್ಟಿ ಹಾಕಿತು. ಸರ್ಕಾರದ ವೈಫಲ್ಯಗಳ ವಿರುದ್ಧ ತಿರುಗಿ ಬೀಳಬೇಕಾದ ಪಕ್ಷ, ನಾಯಕರ ಪಟ್ಟು-ಪ್ರತಿಪಟ್ಟುಗಳಿಂದ ಹೈರಾಣಾಗಿ ಕಾರ್ಯಕರ್ತರನ್ನು ಮತ್ತೊಮ್ಮೆ ನಿರಾಸೆಯ ಮಡುವಿಗೆ ತಳ್ಳಿತು. ಈ ನಡುವೆ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ, ಹೈಕೋರ್ಟ್ ಕಟಕಟೆಯಲ್ಲಿ ವಿಚಾರಣೆಯು ಪಕ್ಷದೊಳಗಿನ ತಿಕ್ಕಾಟಕ್ಕೆ ಅಲ್ಪವಿರಾಮ ನೀಡಿತು. ಇದು ಸಾಲದೆಂಬಂತೆ ಮುಡಾ ಪ್ರಕರಣ ರ್ತಾಕ ಅಂತ್ಯ ಕಾಣುವ ತನಕ ಮತ್ತೊಂದು ಹೋರಾಟ ಸದ್ಯಕ್ಕೆ ಬೇಡ ಎನ್ನುವ ವರಿಷ್ಠರ ಆಣತಿಯು ಭಿನ್ನರ ಕೈಕಟ್ಟಿ ಹಾಕಿತು ಎಂದು ಮೂಲಗಳು ಹೇಳುತ್ತವೆ.
ಮೂಡದ ಒಮ್ಮತ: ಜಂಟಿ ಸಭೆ ಮರುದಿನವೇ ರಮೇಶ್ ಜಾರಕಿಹೊಳಿ, ಯತ್ನಾಳ್, ಲಿಂಬಾವಳಿ ಮತ್ತವರ ತಂಡದಲ್ಲಿ ಲವಲವಿಕೆ ಕಂಡುಬಂತು. ಈ ತಂಡ ಪ್ರತ್ಯೇಕವಾಗಿ ರಾಜಭವನಕ್ಕೆ ತೆರಳಿ ವಾಲ್ಮೀಕಿ ನಿಗಮದ ಹಗರಣದ ತನಿಖೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಆ ಮೂಲಕ ಸಂಘದ ಪ್ರಮುಖರ ಕಸರತ್ತು ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ ಎನ್ನುವುದು ಹೊರಬಿತ್ತು. ವರಿಷ್ಠರು ಅನುಮತಿ ನೀಡಿದ ತಕ್ಷಣ ‘ಇದೇ ನೇತೃತ್ವ’ದಲ್ಲಿ ಮತ್ತೊಂದು ಪಾದಯಾತ್ರೆ ನಡೆಸುತ್ತೇವೆ ಎಂದ ಲಿಂಬಾವಳಿ ಪಕ್ಷದಲ್ಲಿ ಎಲ್ಲವೂ ಸರಿಹೋಗಿಲ್ಲ ಎಂಬ ಪರೋಕ್ಷ ಸುಳಿವು ನೀಡಿದರು. ವಿಜಯೇಂದ್ರ ಅವರ ನಾಯಕತ್ವ ಒಪು್ಪವುದಿಲ್ಲವೆಂಬ ಮನಸ್ಥಿತಿಯಿಂದ ಭಿನ್ನಬಣದ ನಾಯಕರು ಹೊರಬಂದಿಲ್ಲ. ಬಿಜೆಪಿ ಮೇಲುಗೈ ಸಾಧಿಸಲು ಬಿಡಬಾರದು ಎನ್ನುವ ಉನ್ನತ ನಾಯಕರೊಬ್ಬರ ಹವಣಿಕೆ ಹೋರಾಟದ ಮೇಲೂ ಅಡ್ಡಿಪರಿಣಾಮ ಬೀರಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೀಸಲು ರದ್ದು ಹೇಳಿಕೆ ಖಂಡಿಸಿ ಮಂಡಲದಿಂದ ರಾಜ್ಯದ ತನಕ ನಿರಂತರ ಹೋರಾಟಕ್ಕೆ ನಿರೀಕ್ಷಿತ ಸ್ಪಂದನೆ ಲಭಿಸಲಿಲ್ಲ. ಅಂತಃಕಲಹ ದಿಂದ ಸದಸ್ಯತ್ವ ಅಭಿಯಾನಕ್ಕೆ ಹಿನ್ನಡೆ, ಮುಂದಿನ ಹೋರಾಟಗಳನ್ನು ಅಯೋಮಯ ಸ್ಥಿತಿಗೆ ತಳ್ಳಿದೆ. ನಾಯಕತ್ವದ ವೈಫಲ್ಯ ಬಿಂಬಿಸಲು ಬಯಸಿ ದವರಿಗೆ ಈಗಿನ ಸ್ಥಿತಿ ತೃಪ್ತಿ ತಂದಿದೆ. ಆದರೆ ತಟಸ್ಥ ಮುಖಂಡರು ಏನನ್ನೂ ಹೇಳಲಾಗದೆ ಒದ್ದಾಡುತ್ತಿದ್ದರೆ, ಕಾರ್ಯಕರ್ತರು ಬೇಸರದಲ್ಲಿದ್ದಾರೆ.
ಅಯೋಮಯ: ಪಕ್ಷದ ರಾಜ್ಯ ಸಮಿತಿಯಲ್ಲಿ ಎಲ್ಲವನ್ನೂ ಸರಿದೂಗಿಸುವ ಕಾರ್ಯಸೂಚಿಯೊಂದಿಗೆ ಸಮನ್ವಯ ಬೈಠಕ್ ಅಗತ್ಯತೆಯನ್ನು ತೇಲಿಬಿಡಲಾಗಿತ್ತು. ಅತ್ತ ಸಂಘ, ಇತ್ತ ಪಕ್ಷದ ಸಂಘಟನೆ ಮಧ್ಯೆ ಸೇತುಬಂಧವಾದ ಹಿರಿಯ ನಾಯಕರೊಬ್ಬರು ಈ ಪ್ರಸ್ತಾವಕ್ಕೆ ಒತ್ತಾಸೆಯಾದರು. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಬಹಿರಂಗ ಹೇಳಿಕೆಯಿಂದ ಸಂಘಟನೆ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಮೇಜರ್ ಸರ್ಜರಿ ಅಗತ್ಯವಿದೆ ಎಂಬ ಅಭಿಪ್ರಾಯಗಳತ್ತ ದೆಹಲಿ ಹಿರಿತಲೆಗಳು ಚಿತ್ತ ಹರಿಸಿದ್ದವು. ಈ ಹೊತ್ತಿನಲ್ಲೇ ಪಕ್ಷದ ಮೇಲೆ ಹಿಡಿತ ತಪ್ಪದಂತೆ ನೋಡಿಕೊಳ್ಳಲು ಕಾಪಿಟ್ಟುಕೊಂಡ ‘ಅತೃಪ್ತ ತಂಡ’ದ ಮೇಲೆ ದಂಡಾಸ್ತ್ರ ಬಳಕೆಯ ಸುಳಿವು ತಿಳಿದ ದೆಹಲಿ ಪ್ರಭಾವಿಯೊಬ್ಬರು ‘ಸಮನ್ವಯ ಬೈಠಕ್’ ವಿಚಾರ ತೇಲಿಬಿಟ್ಟರು. ಆರ್ಎಸ್ಎಸ್ ಪ್ರಮುಖರು, ಬಿಜೆಪಿ ನಾಯಕರ ಮಧ್ಯೆ ಜಂಟಿ ಸಭೆಯೂ ನಡೆಯಿತು. ವಿಜಯೇಂದ್ರ ವಿರುದ್ಧ ಇದ್ದಬದ್ದ ಸಿಟ್ಟನ್ನೆಲ್ಲ ಅತೃಪ್ತರು ಕಾರಿಕೊಳ್ಳಲು ಆ ದಿನ ಅವಕಾಶ ಕೊಟ್ಟು ‘ಸಂತೋಷ’ಪಟ್ಟವರು ಸಂಘದ ಪ್ರಮುಖರ ಮುಂದೆ ಸಂಭಾವಿತರಾದರು. ರಾಜ್ಯ ನಾಯಕತ್ವದ ಬಗ್ಗೆ ಪದೇಪದೆ ಕಿಡಿಕಾರುತ್ತಿದ್ದವರ ವಿರುದ್ಧ ‘ಶಿಸ್ತುಕ್ರಮ’ ಕೈಗೊಳ್ಳದಂತೆ ರಕ್ಷಿಸಿದ್ದೇ ಸಮನ್ವಯ ಬೈಠಕ್ ಸಾಧನೆಯಾಯಿತು. ‘ಮುಕ್ತ ಚರ್ಚೆ’ ಹಿಡಿದ ಜಾಡು ಕಂಡುಂಡವರು ಸಭೆಯಲ್ಲಿದ್ದರೂ ಮೌನಕ್ಕೆ ಶರಣಾಗಿದ್ದರು. ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಕರೆಯದೆ ಎಲ್ಲರಿಗೂ ಮಾತನಾಡಲು ಅವಕಾಶ ಕೊಡಲಾಗಿತ್ತು. ಒಳ್ಳೆಯ ವಾತಾವರಣದಲ್ಲಿ ಚರ್ಚೆಯಾಗಿದೆ. ಇನ್ನು ಮುಂದೆ ಒಂದಾಗಿ ಹೋಗುತ್ತೇವೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಸಭೆ ನಂತರ ಯತ್ನಾಳ್ ಬೀಗುತ್ತಲೇ ಪ್ರತಿಕ್ರಿಯಿಸಿದ್ದು ಆ ಕ್ಷಣಕ್ಕಷ್ಟೇ ಸೀಮಿತವಾಗಿತ್ತು.
ರೋಗ ನಿರೋಧಕ ಶಕ್ತಿ ಕೊರತೆ: ಒಳಜಗಳದ ಜ್ವರದಿಂದ ಬಳಲುತ್ತಿರುವ ಸಂಘಟನೆಗೆ ರೋಗ ನಿರೋಧಕ ಶಕ್ತಿ ಕೊರತೆಯಾಗಿದೆ. ನಾಯಕರು ಮನೆಯೊಂದು ಮೂರು ಬಾಗಿಲು ರೀತಿಯಲ್ಲಿ ಕವಲು ದಾರಿ ಹಿಡಿದಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರವಾಲ್ ‘ವಸ್ತುಸ್ಥಿತಿ’ಯನ್ನು ದೆಹಲಿ ನಾಯಕರಿಗೆ ತಲುಪಿಸಿದರೆ, ‘ಕಬ್ಬಿಣ ಕಾದಾಗಲೇ ಬಡಿಯುವಂತೆ’ ಸಂಘದ ಪಡಸಾಲೆಗೆ ಕೆಲವು ಪ್ರಾಯೋಜಿತ ಅಸಮಾಧಾನಿತರು ದೂರು ಕೊಂಡೊಯ್ದರು. ಪಕ್ಷದ ರಾಜ್ಯ ಸಮಿತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ದೆಹಲಿಗೆ ಹೋಯಿತು. ವೈಫಲ್ಯಗಳ ವಿರುದ್ಧ ತೊಡೆತಟ್ಟಿ ಜನರ ಬಳಿಗೆ ಹೋಗಲಾಗದಷ್ಟು ಬಿಜೆಪಿ ನಿತ್ರಾಣವಾಗಿದೆ. ಇದನ್ನು ಅರಿತೇ ಕಾಂಗ್ರೆಸ್ ಪಡೆ ಮೊಕದ್ದಮೆಗಳ ಸರಣಿ, ಹಳೆಯ ಪ್ರಕರಣಗಳನ್ನು ಕೆದಕಿ ಮುಗಿಬೀಳಲಾರಂಭಿಸಿದೆ.