ಕಾಫಿಪುಡಿ ಹೊಗೆಗೆ ಸೊಳ್ಳೆ ಔಟ್!

exibition
ಹೊಸನಗರ ತಾಲೂಕು ಗುರೂಜಿ ಇಂಟರ್‌ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ಸೊಳ್ಳೆ ನಿಯಂತ್ರಣದ ಮಾದರಿ ಪ್ರದರ್ಶಿಸಿದರು.
Published on

ಶಿವಮೊಗ್ಗ: ಸೊಳ್ಳೆ ಕಾಟ ಹೆಚ್ಚಿದೆಯೇ? ಚಿಂತಿಸಬೇಡಿ. ಅದಕ್ಕೂ ಇದೆ ಮನೆ ಮದ್ದು. ಅರೇ…! ಇದೇನಿದು ಕಾಯಿಲೆಗಳಿಗೆ ಮನೆಮದ್ದು ಕೇಳಿದ್ದೇವೆ, ಸೊಳ್ಳೆಗಳಿಂದ ಮುಕ್ತಿ ಪಡೆಯಲೂ ಮನೆ ಮದ್ದೇ? ಎಂದು ಹುಬ್ಬೇರಿಸಬೇಡಿ. ಇಂತಹ ಸಾಧ್ಯತೆಯನ್ನು ಕೆಲವು ವಿದ್ಯಾರ್ಥಿಗಳು ಕಂಡುಕೊಂಡಿದ್ದಾರೆ.

ಸೊಳ್ಳೆಯನ್ನು ಓಡಿಸಲು ಅನೇಕ ಸೊಳ್ಳೆ ನಿವಾರಕಗಳು ಮಾರುಕಟ್ಟೆಯಲ್ಲಿವೆ. ಇದರ ನಡುವೆ ಮನೆಯಲ್ಲೇ ಸಿಗಬಹುದಾದ ವಸ್ತುಗಳನ್ನು ಬಳಸಿ ಸೊಳ್ಳೆಯನ್ನು ಓಡಿಸುವುದೇ ಮನೆ ಮದ್ದು. ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ಖರೀದಿಸುವ ಸೊಳ್ಳೆ ನಿವಾರಕಗಳು ಆರೋಗ್ಯಕ್ಕೂ ಹಾನಿಕರ ಎಂಬ ಅಭಿಪ್ರಾಯ ಅನೇಕರದ್ದು. ಇಂತಹವರಿಗೆ ಈ ಮನೆ ಮದ್ದೇ ಪರಿಹಾರ.
ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ, ಬೇವಿನಸೊಪ್ಪು, ಪಲಾವ್‌ಗೆ ಬಳಸುವ ಎಲೆಗಳನ್ನು ಪುಡಿ ಮಾಡಿಕೊಳ್ಳಬೇಕು. ಸಣ್ಣದೊಂದು ಹಳೆಯ ಪಾತ್ರೆಯಲ್ಲಿ ಕೆಂಡ ಮಾಡಿಕೊಂಡು ಈ ಪುಡಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಕೆಂಡಕ್ಕೆ ಹಾಕಿ ಮನೆಯ ಮೂಲೆ ಮೂಲೆಗೂ ಹೊಗೆ ಹೋಗುವಂತೆ ನೋಡಿಕೊಂಡರೆ ಸೊಳ್ಳೆಗಳು ಅಲ್ಲಿಂದ ಕಾಲ್ಕೀಳುತ್ತವೆ. ಇದಕ್ಕೆ ಕಾಫಿ ಪುಡಿಯನ್ನೂ ಬಳಸಿಕೊಳ್ಳಬಹುದು.
ಇಂತಹದೊಂದು ಸಾಧ್ಯತೆಯನ್ನು ವಿವರಿಸಿದ್ದು ಭದ್ರಾವತಿ ಸೇಂಟ್ ಚಾರ್ಲ್ಸ್ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ವರ್ಷಿತಾ ಹಾಗೂ ಜೀವನ್. ಇದಕ್ಕೆ ವೇದಿಕೆಯಾಗಿದ್ದು ಆರೋಗ್ಯ ಇಲಾಖೆಯಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಸೊಳ್ಳೆಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸೊಳ್ಳೆಗಳ ನಿಯಂತ್ರಣ ಮಾದರಿಗಳ ಪ್ರಾತ್ಯಕ್ಷಿಕೆ.
ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಒಟ್ಟು 27 ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಹೊಸನಗರ ತಾಲೂಕು ಬಟ್ಟೆಮಲ್ಲಪ್ಪ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿನಿ ಚಿನ್ಮಯಿ, ಸೊಳ್ಳೆ ಇರುವ ಮನೆಗಳ ನಿರ್ವಹಣೆ ಹೇಗಿರುತ್ತದೆ? ಸೊಳ್ಳೆ ರಹಿತ ಮನೆಗಳನ್ನು ಎಷ್ಟು ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಹೊಸನಗರ ಗುರೂಜಿ ಇಂಟರ್‌ನ್ಯಾಷನಲ್ ಶಾಲೆ ವಿದ್ಯಾರ್ಥಿ ಅಯಾನ ಉಪಾಧ್ಯ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗನವಾಡಿ, ಹಣ್ಣಿನ ಅಂಗಡಿ, ಗ್ಯಾರೇಜ್‌ಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚದಂತೆ ಅನುಸರಿಸಬೇಕಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ಗಮನಸೆಳೆದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಪ್ರಾತ್ಯಕ್ಷಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ವಚ್ಛತೆ ಪಾತ್ರ ಬಹುಮುಖ್ಯ: ಸೊಳ್ಳೆ ನಿಯಂತ್ರಣದಲ್ಲಿ ಸ್ವಚ್ಛತೆ ಮುಖ್ಯ ಪಾತ್ರ ವಹಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈರ್ಮಲ್ಯದ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅದಕ್ಕೆ ನಾವು ಸಹಕಾರ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹೇಳಿದರು.
ಜಿಲ್ಲಾ ಮಟ್ಟದ ಸೊಳ್ಳೆಗಳ ನಿಯಂತ್ರಣ ಮಾದರಿ ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿದ ಅವರು, ಸೊಳ್ಳೆಯಿಂದ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳು ಮತ್ತು ಅವುಗಳ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳು ರೂಪಿಸಿರುವ ಪ್ರಾತ್ಯಕ್ಷಿಕೆ ಗಮನ ಸೆಳೆದಿದೆ ಎಂದರು. ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ. ಗುಡುದಪ್ಪ ಕಸಬಿ ಸೊಳ್ಳೆಗಳ ದಿನ ಮಹತ್ವ ವಿವರಿಸಿದರು. ಆರ್‌ಸಿಎಚ್ ಡಾ. ನಾಗರಾಜ್ ನಾಯ್ಕ, ಶಿಕ್ಷಣ ಸಂಯೋಜಕಿ ಶ್ರೀಮತಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಡಿಎಚ್‌ಒ ಕಚೇರಿ ಆಡಳಿತಾಧಿಕಾರಿ ಈಶ್ವರಪ್ಪ, ರೋಟರಿ ಸಂಸ್ಥೆಯ ಜಿ.ವಿಜಯಕುಮಾರ್ ಮುಂತಾದವರಿದ್ದರು. ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಯೋಜಕ ರಾಘವೇಂದ್ರ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net