ಅನುಮತಿ ನಿರಾಕರಣೆ ಬೆನ್ನಲ್ಲೇ ಸಿಡಿದೆದ್ದ 'ಜಿರಳೆ' ಗಳು: ಅ.2ರಂದು ‘ಜೈಲ್ ಭರೋ’ ಘೋಷಣೆ! ಠಾಕ್ರೆ ಸಹೋದರರ ಬೆಂಬಲ! CJP Protest

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮುಂಬೈನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಯಿಂದ 'ಜೈಲ್ ಭರೋ' ಆಂದೋಲನ. ಠಾಕ್ರೆ ಸಹೋದರರ ಬೆಂಬಲದಿಂದ ತೀವ್ರಗೊಂಡ ರಾಜಕೀಯ ಸಮರ.
CJP founder Abhijit Dipke, former Maharashtra CM Uddhav Thackeray, MNS chief Raj Thackeray
ಸಿಜೆಪಿ ಸ್ಥಾಪಕ ಅಭಿಜೀತ್​ ದಿಪ್ಕೆ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್​ ಠಾಕ್ರೆ, ಎಂಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ
Published on: 

ಮುಂಬೈ: ಅಕ್ಟೋಬರ್​ 2 ರಂದು ಶಿವಾಜಿ ಪಾರ್ಕ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಸರ್ಕಾರದ ವಿರುದ್ಧ ನೇರ ಸಮರ ಸಾರಿದ್ದಾರೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ವಿಶೇಷ ದಿನದಂದೇ ಮುಂಬೈನಲ್ಲಿ ಜೈಲ್ ಭರೋ ಆಂದೋಲನ ನಡೆಸುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ವಿರೋಧಿಸಿ CJP ಈ ಪ್ರತಿಭಟನೆಗೆ ಮುಂದಾಗಿದೆ. ಈ ಹೋರಾಟಕ್ಕೆ ಮಹಾರಾಷ್ಟ್ರದ ಪ್ರಭಾವಿ ನಾಯಕರಾದ ಉದ್ಧವ್​ ಠಾಕ್ರೆ ಹಾಗೂ ರಾಜ್ ಠಾಕ್ರೆಯಿಂದ​ ಬೆಂಬಲ ಸಿಕ್ಕಿರುವುದು ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಅನುಮತಿ ಸಿಗದಿದ್ದರೂ ಹಿಂದೆ ಸರಿಯದ CJP!

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ಸಭೆ ನಡೆಸಿ ಪ್ರತಿಭಟಿಸಲು CJP ಸಿದ್ಧತೆ ನಡೆಸಿತ್ತು. ಆದರೆ, 2013 ರ ಬಾಂಬೆ ಹೈಕೋರ್ಟ್ ಆದೇಶ ಹಾಗೂ ಮೈದಾನದ ಬಳಕೆಯ ಮೇಲಿನ ಕಠಿಣ ನಿಯಮಗಳನ್ನು ಉಲ್ಲೇಖಿಸಿ ಮುಂಬೈ ಪೊಲೀಸರು ಈ ಸಭೆಗೆ ಅನುಮತಿ ನಿರಾಕರಿಸಿದ್ದರು. ಶಬ್ದ ಮಾಲಿನ್ಯ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆ ಉಂಟಾಗಬಹುದು ಎಂಬ ಕಾರಣ ನೀಡಿ, ಬೇರೆ ಪರ್ಯಾಯ ಸ್ಥಳವನ್ನು ಆಯೋಜಕರು ಹುಡುಕಿಕೊಳ್ಳುವಂತೆ ಪೊಲೀಸರು ಹಾಗೂ ಬಿಎಂಸಿ (BMC) ಸ್ಪಷ್ಟಪಡಿಸಿತ್ತು.

ಪೊಲೀಸರ ಈ ನಿರ್ಧಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಭಿಜೀತ್ ದಿಪ್ಕೆ, ಅನುಮತಿ ಸಿಗಲಿಲ್ಲ ಎಂದರೆ ನಾವು ಹೋರಾಟ ಕೈಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದು, ನೇರವಾಗಿ ಜೈಲ್ ಭರೋ ಚಳುವಳಿಯ ಮೂಲಕವೇ ಆಕ್ರೋಶ ಹೊರಹಾಕಲು ತೀರ್ಮಾನಿಸಿದ್ದಾರೆ.

ಪ್ರಮುಖ ಬೇಡಿಕೆಗಳು ಏನು?

ಮುಂಬೈನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ, ಮುಖ್ಯವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ಹಾಗೆಯೇ, ವಿವಾದಕ್ಕೆ ಕಾರಣವಾಗಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ಕೂಡಲೇ ತಡೆಯಬೇಕು. ಅಂತಯೇ, ಚುನಾವಣಾ ಆಯೋಗವನ್ನು ನಿಯಂತ್ರಿಸುವ ಪ್ರಸ್ತುತ ಕಾನೂನು ಚೌಕಟ್ಟಿನಲ್ಲಿ ಅಗತ್ಯ ಹಾಗೂ ಕಟ್ಟುನಿಟ್ಟಾದ ಬದಲಾವಣೆಗಳನ್ನು ತರಬೇಕು ಎನ್ನವುದು 'ಜಿರಳೆ' ಗಳ ಬೇಡಿಕೆಗಳಾಗಿವೆ.

Also Read
ಸಣ್ಣ ಜಗಳಕ್ಕೆ ನಾಲ್ವರ ಬಲಿ! CISF ಹೆಡ್ ಕಾನ್ಸ್‌ಟೇಬಲ್‌ನಿಂದಲೇ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ! CISF Shooting
CJP founder Abhijit Dipke, former Maharashtra CM Uddhav Thackeray, MNS chief Raj Thackeray

ಹೋರಾಟಕ್ಕೆ ಠಾಕ್ರೆ ಸಹೋದರರ ಸಾಥ್!

ಈ ಪ್ರತಿಭಟನೆಗೆ ಮಹಾರಾಷ್ಟ್ರದ ಪ್ರಮುಖ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಮಹಾರಾಷ್ಟ್ರದ ಮಾಜಿ ಸಿಎಂ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ CJP ಯ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಅಲ್ಲದೆ, ಅಕ್ಟೋಬರ್ 4 ರಂದು ಬೈಕುಲ್ಲಾದಿಂದ ಬಿಎಂಸಿ ಪ್ರಧಾನ ಕಚೇರಿಯವರೆಗೆ ಚುನಾವಣಾ ಆಯೋಗದ ವಿರುದ್ಧ ಬೃಹತ್ ಜಂಟಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿಯೂ ಅವರು ಪ್ರತ್ಯೇಕವಾಗಿ ಘೋಷಣೆ ಮಾಡಿದ್ದಾರೆ. ಒಂದು ಕಡೆ ಚುನಾವಣಾ ಆಯೋಗವು ತನ್ನ ಮೇಲಿನ ಆರೋಪಗಳನ್ನು ಮತ್ತು ಸಂಸ್ಥೆಯೊಳಗೆ ಭಿನ್ನಾಭಿಪ್ರಾಯವಿದೆ ಎಂಬ ವಾದಗಳನ್ನು ತಳ್ಳಿಹಾಕುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ಹಾಗೂ ಯುವ ಸಂಘಟನೆಗಳು ರಸ್ತೆಗಿಳಿದು ಹೋರಾಟವನ್ನು ತೀವ್ರಗೊಳಿಸುತ್ತಿರುವುದು ಮುಂಬರುವ ದಿನಗಳಲ್ಲಿ ಭಾರೀ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸುತ್ತಿವೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net