

ಬೆಂಗಳೂರು; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ ಪೊಂಗಲ್ನಲ್ಲಿ ಹುಳ ಪತ್ತೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಕೆಫೆ ವಿರುದ್ಧ ಗ್ರಾಹಕರು ತೀವ್ರ ಆಕ್ರೋಶ ಹೊರಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಂದು (24) ಬೆಳಗ್ಗೆ ಲೋಕನಾಥ್ ಎಂಬುವವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂಪಾಯಿಗೆ ಫಿಲ್ಟರ್ ಕಾಫಿ ಖರೀದಿ ಮಾಡಿದ್ದರಂತೆ. ಒಟ್ಟು ಬಿಲ್ 504 ರೂಪಾಯಿ ಆಗಿತ್ತು ಎನ್ನಲಾಗಿದೆ.
ಈ ಘಟನೆ ಗ್ರಾಹಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಆಹಾರ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರ ಬೆನ್ನಲ್ಲಿ ಗ್ರಾಹಕ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಇನ್ನೂ ಸಿಬ್ಬಂದಿ ಹಾರಿಕೆ ಉತ್ತರ ನೀಡುವುದಲ್ಲದೇ, ಪ್ಲೇಟ್ನ ಒಳಗಿದ್ದ ಹುಳವನ್ನು ತೆಗೆದುಹಾಕಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಆಗ ಗ್ರಾಹಕ ಅದನ್ನು ತೆಗೆದಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಈ ಬಗ್ಗೆ ರಾಮೇಶ್ವರಂ ಕೆಫೆಯ ಸಂಸ್ಥಾಪಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ರೆಸ್ಟೋರೆಂಟ್ಗಳ ಸರಪಣಿಯನ್ನು ಹೊಂದಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.