

ಶಿವಮೊಗ: ನಗರದ ಹೊರವಲಯದಲ್ಲಿನ ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೋಚಿಂಗ್ ಡಿಪೋ 2026ರೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೋಚಿಂಗ್ ಡಿಪೋ ಕಾಮಗಾರಿ ನಡೆಯಲಿರುವ ಜಾಗಕ್ಕೆ ಭೇಟಿ ನೀಡಿ ಯೋಜನೆಯ ಮಾಹಿತಿ ಪಡೆದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, 74 ಎಕರೆ ಪ್ರದೇಶದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಕೋಚಿಂಗ್ ಡಿಪೋ ನಿರ್ಮಾಣವಾಗುತ್ತಿದೆ. ರೈಟ್ಸ್ ಸಂಸ್ಥೆ ಇದರ ಗುತ್ತಿಗೆ ಪಡೆದುಕೊಂಡಿದೆ ಎಂದರು.
ಇಲ್ಲಿ ಕೋಚಿಂಗ್ ಡಿಪೋ ನಿರ್ಮಾಣವಾದ ಬಳಿಕ ರಾಜ್ಯದ ವಿವಿಧೆಡೆಯಿಂದ ರೈಲುಗಳು ಇಲ್ಲಿಗೆ ಬರಲಿವೆ. ಇಲ್ಲಿ ಅವುಗಳನ್ನು ಸ್ವಚ್ಚಗೊಳಿಸಲಾಗುತ್ತದೆ. ಭವಿಷ್ಯದಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಹೇಳಿದರು.
ಆರ್‌ಒಬಿ ನಿರ್ಮಾಣ:ಈ ಭಾಗದ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದೇನೆ. ದೇವಸ್ಥಾನಕ್ಕೆ ತೆರಳಲು ದಾರಿಗೆ ಅವಕಾಶ ನೀಡಬೇಕೆಂದು ಕೆಲವರು ಕೇಳಿದ್ದಾರೆ. ಅದರ ಬಗ್ಗೆಯೂ ಪರಿಶೀಲಿಸಲಾಗುವುದು. ಈ ಹಿಂದೆ ರೈಲ್ವೆ ಮಾರ್ಗ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಈ ಭಾಗದ ಅನೇಕರಿಗೆ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳಿವೆ. ರೈತರು ಸರಿಯಾದ ದಾಖಲೆಗಳನ್ನು ನೀಡಿದರೆ ಪರಿಆರ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿ.ಸೋಮಣ್ಣ ಭರವಸೆ ನೀಡಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ ಮುಂತಾದವರಿದ್ದರು.
ಇದಕ್ಕೂ ಮುನ್ನ ಸೋಮಣ್ಣ ಶಿಕಾರಿಪುರ ತಾಲೂಕು ಹಾರೋಗೊಪ್ಪ ಬಳಿಕ ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.