

ರಾಮನಗರ: ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿದ್ದು, ಕೊಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಮನಗರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಇಲ್ಲಿನ ಸಿಂಗರಾಜಿಪುರ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಹನುಮಯ್ಯ ಹಲ್ಲೆಗೊಳಗಾದವರು. ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ-ಸಿಂಗರಾಜಿಪುರ ರಸ್ತೆಯಲ್ಲಿ ಈ ಹಲ್ಲೆ ನಡೆದಿದೆ.
ಇವರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂದಿನ ಗಾಜಿಗೆ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದರಿಂದ ರಸ್ತೆ ಕಾಣದಂತಾಗಿ ಹನುಮಯ್ಯ ಅವರು ಕಾರು ಪಕ್ಕಕ್ಕೆ ನಿಲ್ಲಿಸಿದ್ದರು. ಆಗ ಕಣ್ಣಿಗೆ ಕಾರದ ಪುಡಿ ಎರಚಿದ ಆರೋಪಿಗಳು ಹಲ್ಲೆ ಮಾಡಿದ್ದರು.
ಆದರೆ ಇದೇ ಸಂದರ್ಭದಲ್ಲಿ ಇನ್ನೊಂದು ಕಾರು ಬಂದ ಕಾರಣ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಾಳು ಹನುಮಯ್ಯ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಳೇ ವೈಷಮ್ಯದ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.