

ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಈ ಪರಿಸ್ಥಿತಿ ಜನಸಾಮಾನ್ಯರಲ್ಲೂ ಆತಂಕ ಮೂಡಿಸಿರುವುದು ನಿಜ. ವೈದ್ಯಕೀಯ ತಜ್ಞರು ಹೇಳುವ ಪ್ರಕಾರ ಜುಲೈ ಅಂತ್ಯ ಮತ್ತು ಆಗಸ್ಟ್ನಲ್ಲಿ ಸೋಂಕು ಪ್ರಸರಣದ ವೇಗ ಮತ್ತಷ್ಟು ಹೆಚ್ಚಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚಲಿದೆ. ಈಗಿರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಹಾಸಿಗೆಗಳು ಇದ್ದಲ್ಲಿ ವೈದ್ಯರಿಲ್ಲ ಎಂಬಂಥ ಸ್ಥಿತಿ ಸಮಸ್ಯೆಯನ್ನು ಮತ್ತಷ್ಟು ವಿಷಮಗೊಳಿಸಿದೆ. ಆರ್ಥಿಕ ಚಟುವಟಿಕೆಗಳು ಈಗಷ್ಟೇ ಚೇತರಿಕೆ ಕಾಣುತ್ತಿರುವುದರಿಂದ ಮತ್ತೊಮ್ಮೆ ಲಾಕ್ಡೌನ್ ಬೇಡ ಎಂಬ ಅಭಿಪ್ರಾಯ ಕೇಳಿಬಂದು, ಸರ್ಕಾರ ಕೂಡ ಇದೇ ನಿಲುವಿಗೆ ಅಂಟಿಕೊಂಡಿತ್ತು. ಆದರೆ, ಸೋಂಕು ಪ್ರಸರಣದ ಕೊಂಡಿಯನ್ನು ಮುರಿಯಲು, ದಿಗ್ಬಂಧನವೇ ಪರಿಹಾರ ಎಂಬ ತಜ್ಞರ ಸಲಹೆಯನ್ನು ಒಪ್ಪಿಕೊಂಡ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತವಾಗಿ ಒಂದು ವಾರದ ಲಾಕ್ಡೌನ್ (ಜುಲೈ 14ರ ರಾತ್ರಿ 8 ಗಂಟೆಯಿಂದ 22ರ ಬೆಳಗ್ಗೆ 5 ಗಂಟೆಯ ತನಕ) ಘೋಷಿಸಿದೆ. ಈ ಅವಧಿಯಲ್ಲಿ ಯಾರೂ ಬೆಂಗಳೂರಿಗೆ ಬರುವಂತಿಲ್ಲ, ಇಲ್ಲಿಂದ ಯಾರೂ ಹೊರ ಹೋಗುವಂತಿಲ್ಲ. ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್ಡೌನ್ ಈಗಾಗಲೇ ಜಾರಿಯಲ್ಲಿದ್ದರೂ, ಅದರಿಂದ ಹೇಳಿಕೊಳ್ಳುವಂಥ ಪ್ರಯೋಜನವಾಗಿಲ್ಲ (ಲಾಕ್ಡೌನ್ಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸರ್ಕಾರ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ).
ಎರಡು ತಿಂಗಳ ಕಾಲ ದಿಗ್ಬಂಧನ ಅನುಭವಿಸಿ ಆರ್ಥಿಕತೆ ಸೇರಿ ಹಲವು ರಂಗಗಳಲ್ಲಿ ಸೊರಗಿದ್ದ ಬೆಂಗಳೂರು ಮತ್ತೊಮ್ಮೆ ಅನಿವಾರ್ಯವಾಗಿ ಲಾಕ್ಡೌನ್ಗೆ ಸಿದ್ಧವಾಗಿದೆ. ದಿಗ್ಬಂಧನ ಜಾರಿಯಾದಾಕ್ಷಣ ಕರೊನಾ ಹಾವಳಿ ಇರುವುದಿಲ್ಲ ಅಂತಲ್ಲ. ಜನಸಂಚಾರ, ಚಟುವಟಿಕೆಗಳು ಸ್ತಬ್ಧವಾಗುವುದರಿಂದ ಸೋಂಕು ಪ್ರಸರಣದ ವೇಗ ತಗ್ಗಿಸಬಹುದಷ್ಟೇ. ಇದನ್ನು ಜನಸಾಮಾನ್ಯರೂ ಅರ್ಥ ಮಾಡಿಕೊಂಡು, ಸಹಕರಿಸಬೇಕಿದೆ. ಕರೊನಾ ನಿಯಂತ್ರಣಕ್ಕೆ ತರುವಲ್ಲಿ ತಮ್ಮದೂ ಪ್ರಮುಖ ಪಾತ್ರ ಇದೆ ಎಂಬುದನ್ನು ಪ್ರತೀ ಜನಸಾಮಾನ್ಯರೂ ಅರಿಯಬೇಕು ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಬೆಂಗಳೂರಿನಲ್ಲಿ ಸೋಂಕು ಸಮುದಾಯ ಹಂತಕ್ಕೆ ಹಬ್ಬಿರುವುದರಿಂದ ಎಷ್ಟು ಮುಂಜಾಗ್ರತೆ ವಹಿಸಿದರೂ ಕಡಿಮೆಯೇ. ಹಾಗಾಗಿ, ಈ ಲಾಕ್ಡೌನ್ ಅವಧಿಯನ್ನು ಸವಾಲಾಗಿ ಸ್ವೀಕರಿಸಿ, ಕರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಆರೋಗ್ಯ ಸೌಕರ್ಯ ಸೇರಿ ಇಡೀ ವ್ಯವಸ್ಥೆಯನ್ನು ಇನ್ನಷ್ಟು ಸನ್ನದ್ಧಗೊಳಿಸಲು ಸರ್ಕಾರ ಶ್ರಮಿಸಬೇಕಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ, ಈಗಿನ ಸಿದ್ಧತೆ, ಸೌಕರ್ಯಗಳು ಸಾಕಾಗುವುದಿಲ್ಲ ಎಂಬುದು ಸ್ಪಷ್ಟ. ವ್ಯವಸ್ಥೆಯಲ್ಲಿ ಏನೆಲ್ಲ ಲೋಪಗಳಿವೆ, ಅವುಗಳನ್ನು ಹೇಗೆ ಸರಿಪಡಿಸಬಹುದು, ಮರಣ ಪ್ರಮಾಣ ತಗ್ಗಿಸುವುದು ಹೇಗೆ ಎಂಬ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಸೂಕ್ತ ಚಿಕಿತ್ಸೆಯ ಕಾರಣ ಚೇತರಿಕೆ ಪ್ರಮಾಣ ಏರಿಕೆ ಕಂಡಿದೆ ಎಂಬುದು ಸಮಾಧಾನದ ಸಂಗತಿ. ಬೇರೆ ಮಹಾನಗರಗಳ ಮಾದರಿಯನ್ನು ಅವಲೋಕಿಸಿ ಅಳವಡಿಸಿಕೊಳ್ಳಲು ಇದು ಸಕಾಲ.