

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿರುವ ಕಾರಣ ಆ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಅಶ್ಲೀಲ ವಿಡಿಯೋ ಹಂಚಿಕೆ ಸಾಮಾಜಿಕ ಅಸೂಕ್ಷ್ಮತೆಯಾಗಿದೆ. ಸಂತ್ರಸ್ತರ ಬಗ್ಗೆ ಆಲೋಚನೆ ಮಾಡದಿರುವುದು ದುರದೃಷ್ಟಕರವೆಂದು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಬೇಸರ ವ್ಯಕ್ತಪಡಿಸಿದರು.
ಈ ಪ್ರಕರಣದ ಬಗ್ಗೆ ಮೊದಲ ಬಾರಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಅಶ್ಲೀಲ ವಿಡಿಯೋ ಅಥವಾ ಪೆನ್ ಡ್ರೈವ್ ಹಂಚಬೇಡ, ಬಂದಿದ್ದರೆ ಡಿಲಿಟ್ ಮಾಡಿರಿ. ಸಭ್ಯತೆಯಲ್ಲವೆಂದು ಆಪ್ತರು, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿರುವೆ ಎಂದರು.
ಅಶ್ಲೀಲ ವಿಡಿಯೋ ಇದೆ ಎಂಬ ಕಾರಣಕ್ಕೆ ನಮ್ಮಿಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದೇ ರೀತಿ ಪೆನ್‌ಡೈವ್, ವಿಡಿಯೋ ಎಂದು ಬಂಧಿಸುತ್ತಾ ಹೋದರೆ ಹಾಸನ ಜಿಲ್ಲೆಯೊಂದರಲ್ಲಿ 1.50 ಲಕ್ಷ ಜನರನ್ನು ಬಂಧಿಸಲು ಸಾಧ್ಯವಾಗುತ್ತದೆಯೆ ?
ಲಕ್ಷಾಂತರ ಜನರ ವಾಟ್ಸಪ್‌ಗೆ ಹಂಚಿಕೆಯಾಗಿರುವುದು ಪ್ರಪಂಚಕ್ಕೆ ಗೊತ್ತಿದೆ. ವಕೀಲರೊಬ್ಬರು ಪೆನ್ ಡ್ರೈವ್ ತಂದುಕೊಟ್ಟರೆಂದು ಅವರನ್ನು ಬಂಧಿಸಲು, ಎಲೆಕ್ಷನ್ ಏಜೆಂಟ್ ಮೊದಲು ತಂದು ಕೊಟ್ಟರು. ಹಾಗಂತ ಅವರ ಮೇಲೂ ಕೇಸ್ ಹಾಕಿ ಬಂಧಿಸಲಾಗುತ್ತದೆಯೆ ?.
ಇದೇ ರೀತಿಯಾದರೆ 15 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಕೇಸ್ ಹಾಕಬೇಕಾಗುತ್ತದೆ. ನನ್ನನ್ನು ಗುರಿ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಪ್ರಕರಣದ ತನಿಖೆ ವ್ಯವಸ್ಥಿತ, ಸರಿಯಾದ ದಿಕ್ಕಿನಲ್ಲಿ ನಡೆಯಬೇಕು ಎಂದು ಪ್ರೀತಂಗೌಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.