

ರಾಮನಗರ : ನನ್ನ ಸಿಡಿ ಬಿಡುಗಡೆ ಮಾಡಲು ಸೂಕ್ತ ಸಂದರ್ಭಕ್ಕಾಗಿ ಕಾಯುವುದು ಬೇಡ. ನಾಳೆ ಬೆಳಗ್ಗೆಯೇ ಮಾಡಲಿ. ಅದೆಲ್ಲವನ್ನು ಎದುರಿಸುವ ಶಕ್ತಿಯನ್ನು ಜನತೆ ನನಗೆ ನೀಡಿದ್ದಾರೆ ಎಂದು ಸಚಿವ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಜಿಲ್ಲಾಡಳಿತ, ಜಿಪಂ, ತಾಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 90 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯೋಗೇಶ್ವರ್ ಸಿಡಿ ಕಿಂಗ್ ಎನ್ನುವುದು ಗೊತ್ತಿದೆ. ಅವರ ಬಳಿಯಿರುವ ಸಿಡಿಯನ್ನು ನಾಳೆಯೇ ಬಿಡುಗಡೆ ಮಾಡಿ ತೋರಿಸಲಿ, ಚನ್ನಪಟ್ಟಣ ಮಾತ್ರವಲ್ಲ, ರಾಜ್ಯದ ಯಾವುದೇ ಮೂಲೆಯಲ್ಲಾದರೂ ಯೋಗೇಶ್ವರ್ ರಾಜಕಾರಣಕ್ಕೆ ಬರಲಿ, ಅವರ ಸವಾಲು ಸ್ವೀಕರಿಸಿ ಎದುರಿಸಲು ನಾನಲ್ಲ, ನನ್ನ ಕಾರ್ಯಕರ್ತರೇ ಸಾಕು.
ಕಳೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಚುನಾವಣೆಯನ್ನೇ ನಡೆಸಲಿಲ್ಲ. ಕೇವಲ ನಾಮಪತ್ರ ಸಲ್ಲಿಸಿ ಹೋಗಿದ್ದೆ. ಒಂದು ದಿನವೂ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ. ನನ್ನ ಕಾರ್ಯಕರ್ತರೇ ಚುನಾವಣೆ ನಡೆಸಿದರು. ಇದನ್ನು ಯೋಗೇಶ್ವರ್ ಮರೆತಿರಬೇಕು ಎಂದು ಹೇಳಿದರು.
ಯೋಗೇಶ್ವರ್ ಬಗ್ಗೆ ಚರ್ಚೆ ನಡೆಸುವುದೇ ಅನವಶ್ಯಕ. ಪದೇಪದೆ ಚರ್ಚಿಸಿ ಅವರ ಮಟ್ಟಕ್ಕೆ ಇಳಿಯಲು ನನಗೆ ಇಷ್ಟವಿಲ್ಲ. ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತೇನೆ. ಅವರಿಗೆ ಇರುವ ಕೆಲಸ ನೋಡಿಕೊಳ್ಳಲಿ ಎಂದರು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ.ಮಹೇಶ್ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ನೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳಿಗೆ ನಾನು ಉತ್ತರ ಕೊಡುವುದು ಸರಿಯಲ್ಲ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಮ್ಮ ಮನೆಗೆ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಕರೆಸಿಕೊಂಡು ಕೋವಿಡ್ ಲಸಿಕೆ ಪಡೆದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂದು ಎಚ್‌ಡಿಕೆ ಲೇವಡಿ ಮಾಡಿದರು.
ಶಾಸಕಿ ಅನಿತಾ ಕುಮಾರಸ್ವಾು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಸ್. ನಿರಂಜನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ತಾಪಂ ಸದಸ್ಯ ಲಕ್ಷ್ಮೀಕಾಂತ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಜಯಕುಮಾರ್, ಜಕಿ ಉಲ್ಲಾ ಖಾನ್, ಜಿ.ಟಿ.ಕೃಷ್ಣ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಮಹದೇವು ಹಾಜರಿದ್ದರು.
ಸದ್ಯದಲ್ಲೇ ಆರೋಗ್ಯ ವಿವಿ ಕಟ್ಟಡ ಕಾಮಗಾರಿ ಆರಂಭ : ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದರು. ಸಣ್ಣಪುಟ್ಟ ಅಡಚಣೆಗಳಿಂದಾಗಿ ಕಳೆದ 12 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಶೀಘ್ರವಾಗಿ ಎಲ್ಲ ಅಡೆತಡೆಗಳು ನಿವಾರಣೆಯಾಗಲಿವೆ ಎಂದು ಕುಮಾರಸ್ವಾಮಿ ಹೇಳಿದರು.
ಎಚ್‌ಡಿಕೆಗೆ ಸಮಸ್ಯೆಗಳ ಸ್ವಾಗತ
ಚನ್ನಪಟ್ಟಣ: ತಾಲೂಕಿನ ಬಿ.ವಿ,ಹಳ್ಳಿ ಮತ್ತು ಎಸ್.ಎಂ.ಹಳ್ಳಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಸಾರ್ವಜನಿಕರ ಸ್ವಾಗತದ ಜತೆಗೆ ಅಹವಾಲುಗಳ ಸುರಿಮಳೆಯಾಯಿತು.
ಈ ವೇಳೆ ಅಮ್ಮಳ್ಳಿದೊಡ್ಡಿ ಗೇಟ್ ಬಳಿ ಎಚ್‌ಡಿಕೆಯನ್ನು ಸ್ವಾಗತಿಸಿ, ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಬಿ.ವಿ.ಹಳ್ಳಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.
ಮೊದಲಿಗೆ ಎಸ್‌ಎಂ ಹಳ್ಳಿಯಲ್ಲಿ ಮಹಿಳೆಯರು ಹಾಗೂ ಇತರರು ವಿವಿಧ ಮಾಸಾಶನ, ಖಾತೆ ಸಮಸ್‌ಎಯಗಳ ಬಗ್ಗೆ ಎಚ್‌ಡಿಕೆ ಗಮನ ಸೆಳೆದರು. ಪ್ರತಿಯೊಬ್ಬರ ಮನವಿ ಆಲಿಸಿದ ಕುಮಾರಸ್ವಾಮಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ತಾಲೂಕಿನಲ್ಲಿ ಸಮರೋಪಾದಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನೀರಾವರಿ ಹಾಗೂ ಗ್ರಾಮೀಣ ಪ್ರದೇಶದ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.
ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ನನ್ನ ಜವಾಬ್ದಾರಿ ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುದೊಡ್ಡಿ ಜಯರಾಂ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜ್, ಮುಖಂಡರಾದ ಸಿಂ.ಲಿಂ.ನಾಗರಾಜು, ಹಾಪ್‌ಕಾಮ್ಸ್ ದೇವರಾಜು, ನಿಜಲಿಂಗೇಗೌಡ, ವಡ್ಡರಹಳ್ಳಿ ರಾಜಣ್ಣ, ಇ.ತಿ.ಶ್ರೀನಿವಾಸ್, ಎಂ.ಎನ್.ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಡಾನೆ ಹಾವಳಿ ತಪ್ಪಿಸಿ : ಬಿ.ವಿ.ಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ರೈತರ ಬೆಳೆ, ತೆಂಗು, ಮಾವು, ಅಡಕೆ ಮರಗಳು ಕಾಡಾನೆಗಳ ದಾಳಿಯಿಂದಾಗಿ ಹಾನಿಗೀಡಾಗುತ್ತಿವೆ. ಅರಣ್ಯ ಇಲಾಖೆಯವರು ಕಾಡಾನೆಗಳ ದಾಳಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ದಯವಿಟ್ಟು ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರು ಮಾಜಿ ಸಿಎಂಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ಅರಿವಿದೆ. ಈಗಾಗಲೇ ಅನೆಗಳಿಗೆ ಕಡಿವಾಣ ಹಾಕಲು ಹಿರಿಯ ಅರಣ್ಯ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಕಡಿಮೆ ಖರ್ಚಿನಲ್ಲಿ ಆನೆಗಳನ್ನು ನಾಡಿಗೆ ಬರದಂತೆ ನಿಯಂತ್ರಿಸುವ ಯೋಜನೆ ರೂಪಿಸಲಾಗಿದೆ. ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.