

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ನಿವೇಶನ ಹಗರಣ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ದಾಖಲೆ ಸಮರವೂ ಶುರುವಾಗಿದೆ. ನಿವೇಶನ ಅಕ್ರಮದ ದಿಕ್ಕು ತಪ್ಪಿಸಲು ದಾಖಲೆಗಳಿಗೆ ವೈಟ್ನರ್ ಹಚ್ಚಿರುವುದಾಗಿ ಕೇಳಿ ಬಂದಿರುವ ಆರೋಪ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪ್ರಾಸಿಕ್ಯೂಷನ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್ಡಿಕೆ ನಡುವಿನ ವಾಕ್ಸಮರವೂ ತಾರಕಕ್ಕೇರಿದ್ದು, ಉಭಯ ನಾಯಕರು ಪರಸ್ಪರ ತೀಕ್ಷ ್ಣ ಮಾತಿನ ಕೆಂಡದ ಮಳೆ ಸುರಿಸುತ್ತಿದ್ದಾರೆ. ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಮುಖ್ಯಮಂತ್ರಿ ಪತ್ನಿ ಪರ್ಯಾಯ ಭೂಮಿಗಾಗಿ ಬೇಡಿಕೆ ಇಟ್ಟ ದಾಖಲೆ ಪತ್ರ ಬಹಿರಂಗಪಡಿಸಿ ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವೂ ನಡೆಯಿತು. ಇನ್ನು ಬಿಜೆಪಿ ಕೂಡ ವೈಟ್ನರ್ ವಿಚಾರ ಕೆದಕಿ ಕಾಂಗ್ರೆಸ್ನ ಕೈ ಹಿಸುಕಿದೆ. ಸಚಿವ ಬೈರತಿ ಸುರೇಶ್ ಹೆಲಿಕ್ಯಾಪ್ಟರ್ ಮೂಲಕ ಮುಡಾ ಕಡತ ಹೊತ್ತು ತಂದಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಅವರ ಏರ್ ಟ್ರಾವೆಲ್ಗೆ ಬಳಕೆ ಆಗಿದೆ. ದಾಖಲೆ ತಿರುಚಲು ವೈಟ್ನರ್ ಹಚ್ಚಲಾಗಿದೆ. ಆರೋಪಿ ವ್ಯಕ್ತಿ ಏಕೆ ಸಂವಿಧಾನಾತ್ಮಕ ಹುದ್ದೆಯಲ್ಲಿ ಮುಂದುವರಿಯಬಾರದೆಂಬುದಕ್ಕೆ ಇದೇ ಉದಾಹರಣೆ ಎಂದು ಬಿಜೆಪಿ ಕೂಡ ಕಿಡಿಕಾರಿದೆ. ಆದರೆ ವೈಟ್ನರ್ ಹಚ್ಚಿರುವುದು ಯಾವಾಗ? ಆನಂತರ ಮುಡಾದಲ್ಲಾದ ನಡಾವಳಿಗಳೇನು ಎಂಬುದನ್ನು ಸ್ಪಷ್ಟಪಡಿಸದೆ ಕೇಸರಿಪಡೆ ಸಿಎಂ ರಾಜೀನಾಮೆಗೆ ಆಗ್ರಹಿಸಿದೆ.
ಹಾಗೆಯೇ, ‘ದಾಖಲೆ ತಿದ್ದುವಂತ ಪರಿಸ್ಥಿತಿ ಬಂದಿಲ್ಲ. ಅಂತಹ ನೀಚ ಕೆಲಸಕ್ಕೆ ನಾವ್ಯಾರೂ ಇಳಿದಿಲ್ಲ’ ಎಂದು ಸರ್ಕಾರದ ಕಡೆಯಿಂದ ತೀಕ್ಷ್ಣ ಸ್ವರೂಪದಲ್ಲಿ ಸಮಜಾಯಿಷಿಯೂ ಬಂದಿದೆ.
ಎಚ್ಡಿಕೆ ಕೈನಲ್ಲಿ ಬ್ರಹ್ಮಾಂಡ: ಅಕ್ರಮ ಗಣಿಗಳಿಗೆ ಅನುಮತಿ ನೀಡಿದ ವಿಷಯಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರದ್ದು ಬ್ರಹ್ಮಾಂಡವೇ ಇದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ’ ಎಂದು ದಾಖಲೆಗಳನ್ನು ತುಂಬಿದ್ದ ಕವರ್ ಒಂದನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು. ಆದರೆ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ. ‘ಈ ದಾಖಲೆಗಳನ್ನು ನಾನು ಈಗಲೇ ಬಿಡುಗಡೆ ಮಾಡಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ. ಏಕೆಂದರೆ, ಸಿಎಂ ಸುತ್ತಮುತ್ತ ದಾಖಲೆಗಳನ್ನು ತಿದ್ದುವ ಪ್ರವೀಣರು ಅನೇಕರು ಇದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಲ್ವಾ?’ ಎಂದು ಕುಮಾರಸ್ವಾಮಿ ಮಾರ್ವಿುಕವಾಗಿ ಹೇಳಿದರು.
ಹಿಟ್ ಎಂಡ್ ರನ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಚಾರದ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದರಲ್ಲದೇ, ಕುಮಾರಸ್ವಾಮಿಯವರದು ಎಂದಿಗೂ ಹಿಟ್ ಎಂಡ್ ರನ್ ಕೇಸ್ ಎಂದರು.
ಇಂದು ಬಿಜೆಪಿ ಹೋರಾಟ: ಯಾರಿಂದ ಪ್ರಮಾಣವಚನ ಬೋಧಿಸಲ್ಪಟ್ಟಿದ್ದಾರೋ, ಯಾರು ಸಂವಿಧಾನದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೋ ಅಂಥ ಸಚಿವರುಗಳೇ ರಾಜ್ಯಪಾಲರ ರಾಜಭವನಕ್ಕೆ ನುಗ್ಗುತ್ತೇವೆ ಎಂದಿದ್ದಲ್ಲದೆ, ರಾಜ್ಯಪಾಲರಿಗೆ ನಾಲಾಯಕ್ ಎಂಬ ಪದ ಬಳಸಿದ್ದನ್ನು ಖಂಡಿಸಿ, ಗುರುವಾರ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿದೆ.
ನಾನು ಯಾವುದೇ ದಾಖಲಾತಿಗಳನ್ನು ತಿದ್ದಿಲ್ಲ. 2014 ರ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿಲ್ಲ. 2021 ರಲ್ಲಿ ಸಲ್ಲಿಸಿದ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿದೆ. ಅಂದು ಮುಡಾ ಮಂಡಳಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. | ಸಿದ್ದರಾಮಯ್ಯ ಮುಖ್ಯಮಂತ್ರಿ
ಮುಡಾ ಹಗರಣ ಹೊರಗೆ ಬರಲು ಕಾಂಗ್ರೆಸ್ ಒಳಗಿನ ಕಿತ್ತಾಟ ಕಾರಣ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಬಹಿರಂಗವಾಗದಂತೆ ತಡೆಯಲಾಗುತ್ತಿದೆ. ಈ ಪ್ರಯತ್ನದ ನಡುವೆಯೂ ಹೊಸ ಹೊಸ ದಾಖಲೆ ಬಹಿರಂಗವಾಗುತ್ತಿದೆ. ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಮುಡಾ ಸಿಎಂ ಪತ್ನಿ ಪರ್ಯಾಯ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ದಾಖಲೆಯನ್ನು ಹಂಚಿಕೆ ಮಾಡಿದ್ದೇ ಕಾಂಗ್ರೆಸ್ ಮುಖಂಡ ಎಂದು ಹೇಳಲಾಗುತ್ತಿದೆ. ಎರಡನೇ ಹಂತದಲ್ಲಿ ಮೃತ ವ್ಯಕ್ತಿಯ ಹೆಸರಲ್ಲಿ ಡಿನೋಟಿಫಿಕೇಶನ್ ಆದ ದಾಖಲೆ ಸಹ ಆಡಳಿತ ಪಕ್ಷದ ಮುಖಂಡರ ವಿವಿಧ ಗ್ರೂಪ್ಗಳಲ್ಲಿ ಹರಿದಾಡಿದೆ. ಮುಂದುವರಿದು ಈ ವಾರಾಂತ್ಯದಲ್ಲಿ ಮತ್ತೊಂದು ಸೆಟ್ ದಾಖಲೆ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಆ ಪಕ್ಷದ ನಾಯಕರೇ ಹೇಳಿದ್ದಾರೆ. ಮುಡಾ ಸದಸ್ಯರಾಗಿದ್ದ ಶಾಸಕರ ಸಹಿ ಇರುವ ದಾಖಲೆ, ಮುಡಾ ನಡಾವಳಿಗೆ ಸಂಬಂಧಿಸಿದ ದಾಖಲೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.