ಸಿಎಂ ಬಜೆಟ್ ಪೂರ್ವಭಾವಿ ಸಭೆಗೆ ಮನವಿಗಳ ಮಹಾಪೂರ | Incentives to boost economic activities

CM budget meeting
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಬಜೆಟ್ ಪೂರ್ವ ಭಾವಿ ಸಭೆಗೆ ಮನವಿಗಳ ಮಹಾಪೂರವೇ ಹರಿದು ಬಂದಿದೆ. 2025-26ನೇ ಸಾಲಿನ ಮುಂಗಡಪತ್ರದ ಬಗ್ಗೆ ಸಂಘ-ಸಂಸ್ಥೆಗಳು ಅಪಾರ ನಿರೀಕ್ಷೆಯಿಟ್ಟುಕೊಂಡಿವೆ.

ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ದಾಖಲೆ ನಿರ್ಮಿಸಲಿದೆ ಎಂಬ ಕಾರಣಕ್ಕೆ ವಿವಿಧ ವಲಯಗಳ ಅಪೇಕ್ಷೆ ಗರಿಗೆದರಲು ಪ್ರಮುಖ ಕಾರಣ. ಇದರಿಂದಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಹಾಗೂ ಸದಸ್ಯರು ಜಮಾಯಿಸಿದ್ದರು.

ಎ್ಕೆಸಿಸಿಐ, ಕಾಸಿಯಾ, ಸಾರಿಗೆ ವಾಹನಗಳ ಸಂಘಟನೆಗಳು, ದಲಿತ ಉದ್ದಿಮೆದಾರರು, ಚಿನ್ನಾಭರಣ ವರ್ತಕರು, ಟ್ರಾವೆಲ್ಸ್ ಮಾಲೀಕರು, ಮದ್ಯ ಪೂರೈಕೆ ಮತ್ತು ಮಾರಾಟಗಾರರು, ಚಾಲಕರ ಸಂಘಗಳು ಮನವಿ ಸಲ್ಲಿಸಿ, ಬಜೆಟ್‌ನಲ್ಲಿ ಅನುದಾನ ಹೆಚ್ಚಳ, ವಿಶೇಷ ಸವಲತ್ತು ಮತ್ತಿತರ ಬೇಡಿಕೆಗಳನ್ನು ವಿವರಿಸಿದರು.

ಇತಿಮಿತಿಯೊಳಗೆ ಪರಿಗಣನೆ

ರಾಜ್ಯದ ಜಿಡಿಪಿ ವೃದ್ಧಿಗೆ ನೆರವಾಗುವ ಉದ್ಯಮ-ವಹಿವಾಟು ಇನ್ನಿತರ ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಏನೆಲ್ಲ ಕ್ರಮಕೈಗೊಳ್ಳಬಹುದೆಂಬ ಚಿಂತನೆ ಮಂಡಿಸಿವೆ. ಉದ್ಯಮ-ವಹಿವಾಟು ಸ್ನೇಹಿ ನೀತಿಗಳ ಜತೆಗೆ ಅನುಷ್ಠಾನ ಹಂತದಲ್ಲಿ ಅಡೆತಡೆ ನಿವಾರಣೆಗೆ ಮೊರೆಯಿಡಲಾಗಿದೆ.

ಹಳೇ ಕಾನೂನುಗಳು ರದ್ದು, ಅನಗತ್ಯವಾದ ದುಬಾರಿ ಶುಲ್ಕ ಇಳಿಸಿ ಖಜಾನೆಗೆ ಆದಾಯ ಸಂಗ್ರಹದ ಮಾರ್ಗೋಪಾಯಗಳು, ಅಭಿವೃದ್ಧಿ ಯೋಜನೆಗಳನ್ನು ಇದೇ ಪ್ರಸ್ತಾಪಿಸಲಾಗಿದೆ. ಜಿಡಿಪಿ ದರ ವೃದ್ಧಿಗೆ ಆರ್ಥಿಕತೆ ಹೆಚ್ಚಳವೇ ಆಧಾರಸ್ತಂಭವಾಗಿದೆ ಎಂದು ಮನದಟ್ಟು ಮಾಡಿಕೊಟ್ಟಿವೆ.

ಅನೇಕ ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಿದ ಸಿಎಂ ಸಿದ್ದರಾಮಯ್ಯ, ಮೋಟಾರು ವಾಹನಗಳು ಬೇರೆ ರಾಜ್ಯದಲ್ಲಿ ನೋಂದಣಿಯನ್ನು ಗಮನಿಸಿದರು. ಅಭಿಪ್ರಾಯ ಆಲಿಸಿ, ಮನವಿಗಳನ್ನು ಸ್ವೀಕರಿಸಿ ಇತಿಮಿತಿಯೊಳಗೆ ಬಜೆಟ್‌ನಲ್ಲಿ ಪರಿಗಣಿಸುವ ಭರವಸೆಯಿತ್ತರು.

ಬಜೆಟ್ ಪೂರ್ವಭಾವಿ ಸಭೆ ಮುಗಿಸಿ ಸಿಎಂ ಅತ್ತ ಹೋದ ನಂತರ ಮದ್ಯ ಮಾರಾಟಗಾರರ ಸಂಘದ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಕೋಪ್ರೋದ್ರಿಕ್ತರಿಗೆ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ ಪ್ರಸಂಗವೂ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net