ಅಂತರ್ಯುದ್ಧ ಶಮನಕ್ಕೆ ಮಂತ್ರಿಗಳ ಮನೆಗೆ ಸಿಎಂ ದಂಡಯಾತ್ರೆ; ಮಾಜಿ ಸಚಿವ ಕಾರಜೋಳ ಅಣಕ

govind karjol
Published on

ಬೆಂಗಳೂರು: ಮಂತ್ರಿಗಳು, ಶಾಸಕರ ನಡುವೆ ಭುಗಿಲೆದ್ದಿರುವ ಅಂತರ್ಯುದ್ಧ ಶಮನಕ್ಕೆ ಮಂತ್ರಿಗಳ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಂಡಯಾತ್ರೆ ಕೈಗೊಂಡಿದ್ದಾರೆ. ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳಲ್ಲೇ ಸಿಎಂಗೆ ಇಂತಹ ಹೀನಾಯಸ್ಥಿತಿ ಬರಬಾರದಿತ್ತು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅಣಕವಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಬರ ಬಿದ್ದು ಬೆಳೆ ಹಾನಿ, ಕುಡಿಯುವ ನೀರು, ವಿದ್ಯುತ್ ಅಭಾವ ಉಲ್ಬಣಿಸಿ ಇಡೀ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಈ ಸಮಸ್ಯೆ ಪರಿಹರಿಸಯವ ಬದಲು ಒಳಜಗಳ ಬಗೆಹರಿಸಲು ಸಿದ್ದರಾಮಯ್ಯ‌ ಹಾಗೂ ಡಿಸಿಎಂ  ಶಿವಕುಮಾರ್ ಮುಳುಗಿದ್ದಾರೆ ಎಂದು ಟೀಕಿಸಿದರು.

ಆಡಳಿತ ಪಕ್ಷದೊಳಗೆ ಸಿಎಂ, ಡಿಸಿಎಂ, ಶಾಮನೂರು ಶಿವಶಂಕರಪ್ಪ ಗುಂಪುಗಳಾಗಿವೆ. ಅನುದಾನವಿಲ್ಲ, ಅಭಿವೃದ್ಧಿ ಕೆಲಸಗಳಾಗುತ್ತಿಲ್ಲವೆಂದು ಶಾಸಕರು ಗುಟುರು ಹಾಕುತ್ತಿದ್ದು, ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಡಿನ್ನರ್ ನೆಪದಲ್ಲಿ ಸಿದ್ದರಾಮಯ್ಯ ಅವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಹೋಗಿದ್ದರು. ಅವರ ಅಸಮಾಧಾನ ತಣಿಸುವ ಜತೆಗೆ ಬೇರೆ ಸಚಿವರ ಅತೃಪ್ತಿ ಶಮನದ ಜವಾಬ್ದಾರಿ ನೀಡಿ, ಮುಂದಿನ ಮುಖ್ಯಮಂತ್ರಿಯಾಗಿ ಭರವಸೆ ನೀಡಿರಬಹುದು ಎಂದು ಗೋವಿಂದ ಕಾರಜೋಳ ಊಹೆ ವ್ಯಕ್ತಪಡಿಸಿದರು.

ರೇಟ್ ಫಿಕ್ಸ್ ಮಾಡಿಕೊಂಡ ಶಾಸಕ !

ಸರ್ಕಾರಿ ಹರಾಜಿನಲ್ಲಿ ಮುಂಚಿತವಾಗಿ ಒಂದು ರೇಟ್ ಫಿಕ್ಸ್ ಮಾಡಿ ನಂತರ ಹರಾಜು ಹಾಕಲಾಗುತ್ತದೆ. ಹಾಗೆಯೇ ಶಾಸಕ ರವಿ ಗಣಿಗ ತನ್ನ ರೇಟ್ 50 ಕೋಟಿ ರೂ.ಗಳೆಂದು ಫಿಕ್ಸ್ ಮಾಡಿಕೊಂಡು ಹರಾಜಾಗಲು ತಯಾರಾಗಿದ್ದಾರೆ. ಆಪರೇಷನ್ ಕಮಲವೆಂಬ ಸುಳ್ಳು ಕತೆ‌ ಕಟ್ಟಿದ್ದಾರೆ ಎಂದು ಗೋವಿಂದ ಕಾರಜೋಳ ಚಾಟಿ ಬೀಸಿದರು.

ಹಾಗೆ ಆಮಿಷವೊಡ್ಡಿದವರು‌ ಯಾರು‌ ? ಹೆಸರು ‌ಬಹಿರಂಗಪಡಿಸಿ ಪೊಲೀಸರಿಗೆ ದೂರು ನೀಡಲಿ. ಬಿಜೆಪಿಯಲ್ಲಿ ಒಂದು ಟೀಮ್ ಇದೆ ಎಂದು ಡಿ ಕೆ.ಶಿವಕುಮಾರ್ ಹೇಳುವುದಾದರೆ ನಿರ್ದಿಷ್ಟ ಹೆಸರು‌ ಹೊರ ಹಾಕಲಿ. ಅವರದೇ ಸರ್ಕಾರ, ಅಧಿಕಾರ ಅವರ ಕೈಯ್ಯಲ್ಲಿದೆ ದಾವೆ ಹೂಡಿ ತನಿಖೆ ನಡೆಸಲಿ ಎಂದು ಸವಾಲು ಹಾಕಿದ ಅವರು, ಆಂತರಿಕ ಅಭದ್ರತೆ ಮುಚ್ಚಿಕೊಳ್ಳಲು ಆಪರೇಷನ್ ಕಮಲವೆಂಬ ಕಪೋಲಕಲ್ಪಿತ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net