ಶಿಲಾನ್ಯಾಸಕ್ಕೆ ಭರದ ಸಿದ್ಧತೆ: ತಯಾರಿ ಪರಿಶೀಲನೆಗೆ ಇಂದು ಯೋಗಿ ಭೇಟಿ

Ayodhya
Published on

ಲಖನೌ: ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ (ಆ.5) ಭರದಿಂದ ಸಿದ್ಧತೆ ನಡೆದಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಅಯೋಧ್ಯೆಗೆ ಭೇಟಿ ತಯಾರಿ ಪರಿಶೀಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದು, ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆದಿತ್ಯನಾಥ ಕಳೆದ ವಾರವೂ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರು. ಕಟ್ಟೆಚ್ಚರ ವಹಿಸುವಂತೆ ಸಿಎಂ ಆದಿತ್ಯನಾಥ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಯಾವುದೇ ಸಮಾಜ-ವಿರೋಧಿ ಶಕ್ತಿಗಳು ಸಮಸ್ಯೆ ಸೃಷ್ಟಿಸದಂತೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಐದಕ್ಕಿಂತ ಹೆಚ್ಚು ಜನರು ಸೇರದಂತೆ ಮನವಿ ಮಾಡಲಾಗಿದೆ ಎಂದು ಅಯೋಧ್ಯೆಯ ವಿಶೇಷ ಎಸ್​ಪಿ ತಿಳಿಸಿದ್ದಾರೆ.

ಕಲ್ಯಾಣ್ ಸಿಂಗ್ ಹೆಮ್ಮೆ: 1992 ಡಿ. 6ರಂದು ಅಯೋಧ್ಯೆಯಲ್ಲಿ ಕರ ಸೇವಕರ ಮೇಲೆ ಗೋಲಿಬಾರ್ ಮಾಡಲು ಅನುಮತಿ ನಿರಾಕರಿಸಿದ್ದಕ್ಕೆ ತಮಗೆ ಹೆಮ್ಮೆಯಿದೆ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಆ ದಿನ ಸಾವಿರಾರು ಜನರು ವಿವಾದಿತ್ದ ಬಾಬರಿ ಕಟ್ಟಡವನ್ನು ನೆಲಸಮ ಮಾಡಿದ್ದರು. ಪ್ರತಿಭಟನೆ ಕೈ ಮೀರಿ ಹೋಗಿ ಕರ ಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ್ದರು. ಅದಾದ ಬೆನ್ನಲ್ಲೇ ಸಿಂಗ್ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.‘

ಆಡ್ವಾಣಿಗೆ ಆಹ್ವಾನ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ರಾಮಮಂದಿರದ ಭೂಮಿಪೂಜೆಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ದೂರವಾಣಿ ಮೂಲಕ ಆಹ್ವಾನಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ಇಬ್ಬರೂ ಮುಖಂಡರನ್ನು ನಿರ್ಲಕ್ಷಿಸಲಾಗಿದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಹೇಳಲಾಗಿತ್ತು. ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮಾಜಿ ಸಿಎಂಗಳಾದ ಕಲ್ಯಾಣ್ ಸಿಂಗ್, ಉಮಾ ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಮುಖರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net