

ಆಗ್ರಾ: ಪ್ರೇಮಸೌಧ ತಾಜ್ ಮಹಲ್ ಭೇಟಿ ಮುಗಿಸಿ ದೆಹಲಿಗೆ ತೆರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆಯೊಂದನ್ನು ನೀಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆತ್ಮೀಯವಾಗೇ ಬೀಳ್ಕೊಟ್ಟರು.
ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್, ಕುಟುಂಬ ಸಮೇತ ಇಂದು ಬೆಳಗ್ಗೆ ಅಹಮದಾಬಾದ್ಗೆ ಬಂದಿಳಿದರು. ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ತಾಜ್ ಮಹಲ್ ವೀಕ್ಷಣೆ ಮಾಡಲು ಆಗ್ರಾಗೆ ತೆರಳಿದರು.
ಸಂಜೆ ನಾಲ್ಕೂವರೆಗೆ ಆಗ್ರಾಗೆ ಬಂದಿಳಿದ ಟ್ರಂಪ್ ದಂಪತಿಯನ್ನು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿ ಕಾರು ಹತ್ತಿ ತಾಜ್ ಮಹಲ್ಗೆ ತೆರಳಿದ ಟ್ರಂಪ್ ದಂಪತಿ ವಿಶ್ವದ ಅದ್ಭುತಗಳಲ್ಲಿ ಒಂದಾದ ಪ್ರೇಮಸೌಧವನ್ನು ಕಣ್ತುಂಬಿಕೊಂಡರು. ಅಲ್ಲದೆ, ತಾಜ್ ಮಹಲ್ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡುವ ಮೂಲಕ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿದರು. ಅಂದಾಜು ಎರಡು ತಾಸು ತಾಜ್ ಮಹಲ್ ವೀಕ್ಷಿಸಿದ ಟ್ರಂಪ್ ದಂಪತಿ ಆಗ್ರಾದಿಂದ ಸಂಜೆ 7 ಗಂಟೆ ಸುಮಾರಿಗೆ ದೆಹಲಿಯತ್ತ ಪ್ರಯಾಣ ಬೆಳೆಸಿದರು.
ಟ್ರಂಪ್ ದೆಹಲಿಗೆ ತೆರಳುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲಿನ ಸುಂದರ ಫೋಟೋವನ್ನು ಉಡುಗೊರೆಯಾಗಿ ನೀಡಿ, ಆತ್ಮೀಯವಾಗೇ ಬೀಳ್ಕೊಟ್ಟರು. (ಏಜೆನ್ಸೀಸ್)