ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿದ್ದೇನು?

bsy
Published on

ದೆಹಲಿ: ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಬಳಿಕ ಗುರುವಾರ ಕಲಬುರಗಿಯಿಂದಲೇ ದೆಹಲಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತೆರಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ದೆಹಲಿ ಭೇಟಿಯ ಉದ್ದೇಶದ ಬಗ್ಗೆ ವಿವರಿಸಿದರು.

ಇಂದು (ಗುರುವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ನಿರ್ಮಲಾ ಸೀತಾರಾಮನ್​, ರಾಜನಾಥ್​ಸಿಂಗ್​ ಅವರನ್ನು ಭೇಟಿ ಮಾಡುವೆ. ನಾಳೆ(ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಸಮಯ ನಿಗದಿಯಾಗುತ್ತಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಲಾಗುವುದು. ಸಂಪುಟ ವಿಸ್ತರಣೆಗೆ ಅನುಮತಿ ಕೇಳಲಾಗುವುದು ಎಂದು ತಿಳಿಸಿದರು. ಅಲ್ಲದೆ ಹಲವು ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತೆ ಚರ್ಚಿಸುವುದಾಗಿ ಹೇಳಿದರು.

ದೆಹಲಿಗೆ ಸಿಎಂ ಭೇಟಿ ನೀಡುತ್ತಿದ್ದಂತೆ ಸಂಪುಟ ವಿಸ್ತರಣೆ ಕುತೂಹಲ ಹೆಚ್ಚಿಸಿದೆ. ಅಲ್ಲದೆ ಆಕಾಂಕ್ಷಿಗಳಲ್ಲೂ ತಳಮಳ ಹೆಚ್ಚಾಗಿದೆ. ಸಂಪುಟ ವಿಸ್ತರಣೆಗೆ ವರಿಷ್ಠರು ಅಸ್ತು ಎಂದರೆ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆ ಆಗಲಿದೆ. ಒಂದು ವೇಳೆ ಹೈಕಮಾಂಡ್​ ಒಪ್ಪದಿದ್ದರೆ ಅಧಿವೇಶನ ಮುಗಿಯುವ ತನಕ ಮುಂದೂಡಲ್ಪಡಬಹುದು ಎಂಬ ಮಾತು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net