

ಬೆಂಗಳೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆಗೆ ಮೊದಲ ಜಯ ಲಭಿಸಿದೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಾವೇ ತೋಡಿಕೊಂಡ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು 40 ವರ್ಷಗಳ ರಾಜಕಾರಣದಲ್ಲಿ ನಾನೊಬ್ಬ ಪ್ರಾಮಾಣಿಕ, ನನಗೆ ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂದು ಅವರಷ್ಟಕ್ಕೇ ಅವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಪಾರದರ್ಶಕ ಆಡಳಿತ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದರು ಎಂದು ಟೀಕಿಸಿದರು.
ಪಾರದರ್ಶಕಕ್ಕಿಂತ ಪ್ರಾಮಾಣಿಕ ಆಡಳಿತ ಬಹಳ ಮುಖ್ಯ. ಪ್ರಾಮಾಣಿಕ ಆಡಳಿತದ ವಿಚಾರದಲ್ಲಿ ಸಿದ್ದರಾಮಯ್ಯನವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಮಾನ ಹರಾಜು
120 ವರ್ಷಗಳ ಹಳೆಯದಾದ ಕಾಂಗ್ರೆಸ್ ಪಾರ್ಟಿಯ ಮಾನ, ಮರ್ಯಾದೆ ಹಾದಿಬೀದಿಯಲ್ಲಿ ಹರಾಜಾಗುತ್ತಿದೆ. ಅದಕ್ಕೆ ಸಿದ್ದರಾಮಯ್ಯನವರು ಕಾರಣ ಎಂದು ಗೋವಿಂದ ಕಾರಜೋಳ ಕಿಡಿಕಾರಿದರು.
ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಅವರು ಅಧಿಕಾರಕ್ಕೆ ಅಂಟಿಕೊಂಡು ಭಂಡತನ ಪ್ರದರ್ಶನ ಮಾಡಿದ್ದಾರೆ.
ಸ್ವಾತಂತ್ರ್ಯ ಬಂದ ಬಳಿಕ 75 ವರ್ಷಗಳ ದೇಶದ ಇತಿಹಾಸದಲ್ಲಿ ಈ ರೀತಿ ಗೌರವಾನ್ವಿತ ರಾಜ್ಯಪಾಲರ ಮೇಲೆ ಆಪಾದನೆ ಮಾಡಿದ ಯಾವ ಮುಖ್ಯಮಂತ್ರಿಯೂ ಇಲ್ಲ ಎಂದು ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.