

ಮೈಸೂರು: ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಕೈಗೊಂಡರೆ, ಮತ್ತೊಂದೆಡೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಸಿದ್ದರಾಮಯ್ಯ, ಕಮಲ ಹಾಗೂ ಜೆಡಿಎಸ್ ನಾಯಕರು ನಡೆಸಿರುವ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬಂದ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, "ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳು ಆರೋಪಗಳನ್ನು ಹೊರಿಸಿ ನನಗೆ ಕಪ್ಪು ಮಸಿ ಬಳಿದು ರಾಜಕೀಯವಾಗಿ ನನ್ನನ್ನು ಅಳಿದರೆ ನಮಗೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿ ಇದ್ದಾರೆ. ನಾನು ಅವರ ಹಗರಣವನ್ನು ಬಹಿರಂಗ ಪಡಿಸುತ್ತೇನೆ. ಜನಾಂದೋಲನ ಸಮಾವೇಶದಲ್ಲಿ ಅವರ ಕೆಲವು ಹಗರಣಗಳನ್ನು ತೆರೆದಿಟ್ಟಿದ್ದೇನೆ. ಇನ್ನು ಕೆಲವು ವಿಚಾರಣೆ ಹಂತದಲ್ಲಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ನಾಯಕರ ವಿರುದ್ಧ ಹಲವು ಹಗರಣಗಳು ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಆಧಾರಿಸಿ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ" ಎಂದು ಎಚ್ಚರಿಸಿದರು.
"ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಸುಳ್ಳು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಜನಾಂದೋಲನ ಸಮಾವೇಶ ನಡೆಸಿದೆವು. ಸುಳ್ಳು ಆರೋಪಗಳನ್ನು ಇಟ್ಟುಕೊಂಡು ಅವರು ಪಾದಯಾತ್ರೆ ನಡೆಸಿದ್ದಾರೆ" ಎಂದರು.