

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ, ಬೊಕ್ಕೆ ನೀಡುವುದನ್ನು ನಿಷೇಧಿಸಿ ಅದರ ಬದಲು ಪುಸ್ತಕ ನೀಡುವಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಂದು ಆದೇಶ ಮಾಡಿಸಲು ಮುಂದಾಗಿದ್ದಾರೆ.
ಗಡಿಜಿಲ್ಲೆಗಳ ಭೇಟಿ ಪ್ರಯುಕ್ತ ಇಂದು ಮಂಗಳೂರಿಗೆ ಬಂದಿಳಿದ ಸಿಎಂ ಬೊಮ್ಮಾಯಿ, ವಿಮಾನನಿಲ್ದಾಣದಲ್ಲಿ ಗಾರ್ಡ್ ಆಫ್ ಆನರ್ ಬೇಡ ಎಂದಿದ್ದರು. ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟಾಗ ಮಾತ್ರ ಗಾರ್ಡ್ ಆಫ್ ಆನರ್ ನೀಡಿ. ಉಳಿದ ಕಾರ್ಯಕ್ರಮಗಳಿಗೆ ಹಾಗೂ ಹೋಗುವಾಗ ಬರುವಾಗ ಗಾರ್ಡ್ ಆಫ್ ಆನರ್ ಬೇಡ ಅಂತ ಐಜಿಪಿಗೆ ಹೇಳಿದ್ದರು.
ಇದೀಗ ಮುಂದುವರಿದು, ಆ ಸಂಬಂಧ ಮತ್ತೊಂದು ಆದೇಶ ಹೊರಡಿಸಲು ಮುಂದಾಗಿದ್ದಾರೆ. ತಮಗೆ ಮಾತ್ರವಲ್ಲದೆ ಎಲ್ಲ ಸಚಿವರಿಗೂ ಅನ್ವಯವಾಗುವಂತೆ ಪ್ರತಿ ಜಿಲ್ಲೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳ ಭೇಟಿ ಸಂದರ್ಭದಲ್ಲಿ ಗಾರ್ಡ್ ಆಫ್ ಆನರ್ ನಿಷೇಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಲಿದ್ದಾರೆ.