ಸಿಎಂ ಅವಧಿ ನವೆಂಬರ್‌ನಲ್ಲಿ ಮುಕ್ತಾಯ; ಅಶೋಕ್ ಹೇಳಿಕೆಗೆ ಡಾ.ಪರಮೇಶ್ವರ ತಿರುಗೇಟು|CM term ends in November

ggp1
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿ ನವೆಂಬರ್‌ನಲ್ಲಿ ಮುಕ್ತಾಯ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಗೃಹ ಸಚಿವ ಡಾ.ಪರಮೇಶ್ವರ ತಿರುಗೇಟು ನೀಡಿದ್ದಾರೆ(CM term ends in November; Dr. Parameshwar responded to Ashok's statement).

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಶೋಕ್ ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತರು ಎಂಬುದು ನಮಗೆ ಗೊತ್ತಿಲ್ಲ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ ಐದೂ ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಅಂದುಕೊಂಡಿದ್ದೇವೆ ಎಂದರು.

ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಗಿದೆ. ಆ ಸಂದರ್ಭದಲ್ಲಿ ಅವರು ಎರಡೂವರೆ ವರ್ಷ ಮಾತ್ರ ಇರುತ್ತಾರೆ ಎಂದು ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದುಕೊಂಡಿದ್ದೇವೆ. ಈ ಮಧ್ಯೆ ಹೈಕಮಾಂಡ್ ಏನು ತೀರ್ಮಾ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದರು.

ನಾನು ದೆಹಲಿಗೆ ಹೋಗಬೇಕು ಎಂದು ಅಂದುಕೊಂಡಿದ್ದೇನೆ. ಇನ್ನೂ ಯಾವಾಗ ಎಂಬುದು ನಿಗದಿಯಾಗಿಲ್ಲ. ಆದರೆ, ದೆಹಲಿಗೆ ನಾನು ರಾಜಕೀಯ ಕಾರಣಕ್ಕೆ ಹೋಗುತ್ತಿಲ್ಲ. ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋಗಬೇಕಿದೆ. ರಾಜಕೀಯ ಕಾರಣಕ್ಕೆ ಹೋಗುವುದಿಲ್ಲ. ಏಕೆಂದರೆ ಇಲ್ಲಿಗೇ ನಮ್ಮ ಎಐಸಿಸಿ ಅಧ್ಯಕ್ಷರು, ಉಸ್ತುವಾರಿಗಳು ಬರುತ್ತಾರೆ. ಆಗಲೇ ಏನಾದರೂ ಇದ್ದರೆ ಚರ್ಚೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್ ರಾಜೀನಾಮೆ ಯಾಕೆ ಕೊಟ್ಟರು ಎಂಬುದು ಗೊತ್ತಿಲ್ಲ. ಅವರು ಯಾಕೆ ರಾಜೀನಾಮೆ ಕೊಟ್ಟರು ಎಂಬುದನ್ನು ಸಿಎಂಗೆ ಹೇಳಿರುತ್ತಾರೆ. ಅವರಿಗೆ ಏನು ಅಸಮಧಾನ ಎಂಬುದು ಗೊತ್ತಿಲ್ಲ. ರಾಜೀನಾಮೆ ಕೊಟ್ಟ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ಜಾರಿಗೊಳಿಸುತ್ತಿದ್ದೇವೆ. ಮಸೂದೆ ಮಾಡಿದ ಮೇಲೆ ಕೋರ್ಟಿನಲ್ಲಿ ತಡೆಯಾಜ್ಞೆ ಸಿಗಬಾರದು. ಹಾಗಾಗಿ ಈಗ ಇರುವ ಬೇರೆ ಬೇರೆ ಕಾನೂನುಗಳನ್ನು ಬಳಸಿಕೊಂಡು ಹೊಸ ಮಸೂದೆ ಮಾಡಲು ಅಧಿಕಾರಿಗಳಿಗೆ ಸಿಎಂ ಹೇಳಿದ್ದಾರೆ. ಮಸೂದೆ ಕರಡು ಆದಷ್ಟು ಬೇಗ ಮುಗಿದರೆ ರಾಜ್ಯಪಾಲರ ಒಪ್ಪಿಗೆಗೆ ಕಳಿಸಲಾಗುವುದು ಎಂದು ಡಾ.ಪರಮೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net