

ಬೆಂಗಳೂರು: ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಶುಕ್ರವಾರ ಸಭೆ ನಡೆಸಿದರು.
ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ ಸಿಎಂ, ಡಿಸಿಎಂ, ಚುನಾವಣೆ ತಯಾರಿಗೆ ಸೂಚನೆ ನೀಡಿದರು.
ಚುನಾವಣೆಗೆ ಸ್ಪರ್ಧಿಸ ಬಯಸಿರುವ ಆಕಾಂಕ್ಷಿಗಳನ್ನು ಪಟ್ಟಿ ಮಾಡಿ ಸೂಕ್ತವಾದವರನ್ನು ಆಯ್ಕೆ ಮಾಡಲಾಗುತ್ತದೆ. ಎಷ್ಟೇ ಅರ್ಜಿಗಳು ಬಂದರೂ ಪಕ್ಷಕ್ಕೆ ದುಡಿದವರು, ಚಿರಪರಿಚಿತರಾದವರನ್ನು ಆಯ್ಕೆ ಮಾಡಲಾಗುವುದು. ಈಗಲೇ ಯಾರನ್ನು ಅಂತಿಮಗೊಳಿಸಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ಪಕ್ಷದ ಕಡೆಯಿಂದ ಮತದಾರರ ನೋಂದಣಿ ಆಗಬೇಕು ಮತ್ತು ಆಕಾಂಕ್ಷಿಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಸಬೇಕು. ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಕರು ಮತ್ತು ನಾಡಿನ ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಹೀಗಾಗಿ ಅವರೆಲ್ಲಾ ನಮ್ಮ ಪರವಾಗಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ ಎಂದು ಹೇಳಿದರು.
ಜನವರಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ. ನಾವು ವಿದ್ಯಾವಂತ ಯುವಕ ಯುವತಿಯರಿಗೆ 24 ತಿಂಗಳ ಕಾಲ ಯುವನಿಧಿ ಕೊಡುವ ಜತೆಗೆ ಉದ್ಯೋಗ ಸೃಷ್ಟಿಗೆ ಹಲವು ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಟಿಕೆಟ್ ಆಕಾಂಕ್ಷಿಗಳು ಶಿಕ್ಷಕ ಸದಸ್ಯರು ಮತ್ತು ಪದವೀಧರ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಮಾತು ಮತ್ತು ಬೇಡಿಕೆಗಳನ್ನು ಕೇಳಿಸಿಕೊಂಡು ನಮಗೆ ತಿಳಿಸಿ. ನಾಡಿನ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದಕ್ಕಾಗಿ ಪಕ್ಷ ಮತ್ತು ಸರ್ಕಾರ ಶ್ರಮಿಸಲಿದೆ. ಇದನ್ನು ಮತದಾರರಿಗೆ ಸರಿಯಾಗಿ ಅರ್ಥ ಮಾಡಿಸಿ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಹಾರೈಸಿದರು.
ಟಿಕೆಟ್ ಆಕಾಂಕ್ಷಿಗಳು ಮತ್ತು ಎಲ್ಲಾ ಶಾಸಕರು ಮತ್ತು ಜಿಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ಟಿಕೆಟ್ ಯಾರಿಗೇ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಪುಟ್ಟಣ್ಣ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಉದ್ದೇಶದಿಂದ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ಅವಧಿ ಅಥವಾ ಈ ಸ್ಥಾನದ ಅವಧಿ 2026ರ ನವೆಂಬರ್ 11ರವರೆಗೂ ಇದೆ. ಇಲ್ಲಿಗೆ ಈಗ ಹೊಸ ಸದಸ್ಯನ ಆಯ್ಕೆಯಾಗಬೇಕಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಆಯನೂರು ಮಂಜುನಾಥ್ ಅವಧಿ 2024ರ ಜೂನ್ 21ರವರೆಗೂ ಇದೆ. ಆದರೆ, ಬಿಜೆಪಿಗೆ ವಿದಾಯ ಹೇಳಿ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದ ಪರಿಣಾಮ ನೈರುತ್ಯ ಪದವೀಧರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.
ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರ ಅವಧಿ 2024ರ ಜೂನ್‌ನಲ್ಲಿ ಮುಗಿಯಲಿದ್ದು, ಚುನಾವಣೆ ಪೂರ್ವ ಪ್ರಕ್ರಿಯೆಯಾಗಿ ನವೆಂಬರ್‌ನಲ್ಲಿ ಮತದಾರರ ಪಟ್ಟಿಗೆ ನೋಂದಣಿ- ಪರಿಷ್ಕರಣೆ ಪ್ರಕ್ರಿಯೆ ನಡೆಯುವುದು.