ಸಿಎಂ ಬೆಂಬಲಿಸಿ ರಾಜಭವನ ಚಲೋ: ರಾಜಭವನ ಮುತ್ತಿಗೆ ಯತ್ನ

Raghu_27_Shoshitha_Samudaya_Okkuta_Protest_@_Freedom_Park (18)
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ವತಿಯಿಂದ ಮಂಗಳವಾರ ರಾಜಭವನ ಚಲೋ ಪ್ರತಿಭಟನಾ ಸಮಾವೇಶ ನಡೆಸಿದ ಪ್ರತಿಭಟನಾಕಾರರು ರಾಜಭವನ ಮುತ್ತಿಗೆ ಯತ್ನ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಜನರಿಂದ ಚುನಾಯಿತವಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕುತಂತ್ರ ಮಾಡುತ್ತಿವೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಥ್, ಬಿಜೆಪಿಯ ಹಾಗೂ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಬಾಕಿ ಇರುವ ಪ್ರಕರಣವನ್ನು ಕಡೆಗಣಿಸಲಾಗಿದೆ. ಬಿಜೆಪಿಯ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರುಗಳ ವಿರುದ್ಧದ ಪ್ರಕರಣಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ವಿಳಂಬ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣದಲ್ಲಿ ಕೆಲವೇ ಗಂಟೆಗಳಲ್ಲೆ ಪ್ರಕ್ರಿಯೆಗಳು ಆರಂಭವಾಗಿದೆ. ಇದು ದುರದ್ದೇಶಪೂರಿತ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೊಶ ವ್ಯಕ್ತಪಡಿಸಿದರು.
ಒಕ್ಕೂಟದ ಸಂಚಾಲಕ ಮಾವಳಿ ಶಂಕರ್ ಮಾತನಾಡಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಥ್, ಬಿಜೆಪಿಯ ಹಾಗೂ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅನ್ನ ಭಾಗ್ಯ ಸೇರಿ ಹಲವು ಭಾಗ್ಯಗಳನ್ನು ನೀಡಿದ ಭಾಗ್ಯದಾತ ಸಿದ್ದರಾಮಯ್ಯ. ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅವರು ಕೊಟ್ಟಂತಹ ಅವಕಾಶಗಳನ್ನು ಮತ್ಯಾರು ಕೊಟ್ಟಿಲ್ಲ. ಸಿದ್ದರಾಮಯ್ಯ ಬೆನ್ನಿಗೆ ನಾವು ಇದ್ದೇವೆ ಎಂಬುದನ್ನು ಈ ಮೂಲಕ ತೋರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಕ್ಷಿಸುವ ಮತ್ತು ಉಳಿಸುವ ಕೆಲವಾಗಬೇಕಿದೆ ಎಂದರು.
ನಿಮ್ಮ ಮಕ್ಕಳನ್ನು ವಿಶ್ವ ಹಿಂದೂಪರಿಷತ್, ಭಜರಂಗದಳ ಮತ್ತು ಶ್ರೀರಾಮ ಸೇನೆಗೆ ಕಳಹಿಸಬೇಡಿ. ಹೋರಾಟ ಮಾಡಲು ನಾವು, ಜೈಲಿಗೆ ಹೋಗಲು ನಾವು ಆದರೆ ಅಧಿಕಾರ ಅನುಭವಿಸುವುದು ಮಾತ್ರ ಅವರು, ಹೀಗಾಗಿ ನಮ್ಮ ಯುವಕರು ಈ ಸಿದ್ದಾಂತಕ್ಕೆ ಬಲಿಯಾಗಬಾರದು ಎಂದು ಹೇಳಿದರು.
ಮಾತಿನ ಚಕಮಕಿ:
ರಾಜಭವನ ಚಲೋ ಪ್ರತಿಭಟನಾ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಆಗಮಿಸಿ ಫೀಡ್ರಂ ಪಾರ್ಕಿನಲ್ಲಿ ಜಮಾಯಿಸಿದ್ದರು. ಸಮಾವೇಶ ನಡೆಸಿದ ಬಳಿಕ ರಾಜಭವನ ಮುತ್ತಿಗೆ ಹಾಕಲು ಹೊರಟ್ಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ದಾರಿ ಮಧ್ಯೆ ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಬಿಎಂಟಿಸಿ ಬಸ್‌ನಲ್ಲಿ ಕರೆದೊಯ್ದರು.
ಸಂಚಾರ ದಟ್ಟಣೆ:
ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದದ ಬಸ್ ಸೇರಿ ಇತರೆ ವಾಹನಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಫೀಡ್ರಂ ಪಾರ್ಕ್ ಬಳಿ ಆಗಮಿಸಿದ್ದರು. ಕೆಲವರನ್ನು ನಗರಕ್ಕೆ ಆಗಮಿಸುವ ಮುನ್ನವೇ ಪೊಲೀಸರು ತಡೆದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಮುಂಭಾಗದ ಒಂದು ರಸ್ತೆಯನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿಷೇಧಿಸಲಾಗಿತ್ತು. ಈ ರಸ್ತೆಯಲ್ಲಿಯೇ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನವನದ ಸುತ್ತ ಮುತ್ತ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net