

ಬೆಂಗಳೂರು: ರಾಮಕೃಷ್ಣ ಹೆಗಡೆಯವರು ಟೆಲಿಫೋನ್ ಹಗರಣ ಬಂದಾಗ ರಾಜಿನಾಮೆ ಕೊಟ್ಟಿದ್ದರು. ಅವರ ಶಿಷ್ಯರಾಗಿರುವ ಸಿದ್ದರಾಮಯ್ಯ ಮುಡಾ ಹಗರಣ ಬೆಳಕಿಗೆ ಬರುತ್ತಲೇ ರಾಜೀನಾಮೆ ಕೊಡಬೇಕಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಅವರೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಮುಡಾ ಹಗರಣದಲ್ಲಿ ಸರ್ಕಾರಕ್ಕೆ ಮುಖಭಂಗ ಆಗಿದೆ. ಸರ್ಕಾರ ಬದುಕಿದೆಯೋ ಎನ್ನುವ ಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಟೀಕಿಸಿದರು.
ಈ ಸರ್ಕಾರ ಪಾಪರ್ ಆಗಿದ್ದು ಗುಂಡಿ ಮುಚ್ಚಲೂ ಸರ್ಕಾರದ ಬಳಿ ಹಣ ಇಲ್ಲ. ಈ ಸರ್ಕಾರ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿಲ್ಲ. ಕಾಸು ಇಲ್ಲದ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಕಮೀಷನ್ ಜಾಸ್ತಿ ಆಗಿದೆ ಅಂತಾನೋ? ಬಿಲ್ ಬಂದಿಲ್ಲ ಅಂತ ಮಾಡ್ತಿದ್ದಾರೋ ಗೊತ್ತಿಲ್ಲ. ಶೇ.25 ಹಣ ಅಂದರೆ ಸುಮಾರು 1,500 ಕೋಟಿ ಹಣ ತಡೆಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಹಣ ತಡೆ ಹಿಡಿಯಲಾಗಿದೆ. ಯಾಕೆ ಕಮೀಷನ್‌ಗಾಗಿ ತಡೆ ಹಿಡಿಯಲಾಗಿದೆಯಾ ಎಂದು ಪ್ರಶ್ನೆ ಮಾಡಿದರು.
ನಿತ್ಯ ಒಬ್ಬೊಬ್ಬರು ಸಿಎಂ ಸ್ಥಾನದ ಮೇಲೆ ಕಲರ್ ಕಲರ್ ಟವಲ್ ಹಾಕಿ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಮೀರ್, ದೇಶಪಾಂಡೆ, ಪರಮೇಶ್ವರ್ ಜಾರಕಿಹೋಳಿ ಒಂದೊಂದು ರೀತಿ ಸಿಎಂ ಸ್ಥಾನದ ಮೇಲೆ ಟವಲ್ ಹಾಕುತ್ತಿದ್ದಾರೆ. ಮುಡಾ ಎಂಬ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಮ್ಯೂಸಿಕ್ ನಿಂತ ಕೂಡಲೇ ಸಿಎಂ ಸ್ಥಾನದ ಮೇಲೆ ಕೂತುಕೊಳ್ಳೋಕೆ ಟವಲ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಕುಳಿತುಕೊಳ್ಳೋಣ ಎಂದು ಸಿದ್ಧರಾಗಿದ್ದಾರೆ. ಈ ಸರ್ಕಾರಕ್ಕೆ ಲಂಗು ಲಗಾಮು ಇಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ನಂಬಿಕೆ ನಕ್ಷೆ ಯೋಜನೆ ಜಾರಿ ಬ್ರ್ಯಾಂಡ್ ಬೆಂಗಳೂರು ನಾಟಕದ ಮತ್ತೊಂದು ಅಧ್ಯಾಯ. ಅಪನಂಬಿಕೆ ಸರ್ಕಾರದಿಂದ ನಂಬಿಕೆ ಹೆಸರಿನಲ್ಲಿ ಯೋಜನೆ ಘೊಷಣೆ ಆಗಿರುವುದು ದೊಡ್ಡ ವಿರೋಧಾಭಾಸ.
-ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ.