AI ಕಾಲಘಟ್ಟದಲ್ಲೂ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಪ್ರಯೋಜನವಿಲ್ಲ: ಕೇಂದ್ರದ ವಿರುದ್ಧ ಮತ್ತೆ ಗುಡುಗಿದ ಸಿಎಂ ಸ್ಟಾಲಿನ್ | Hindi Imposition

ವಿಜಯವಾಣಿ - 2025-02-28T205739.103
Published on

ಚೆನ್ನೈ: ನಿಜವಾದ ಪ್ರಗತಿ ಭಾಷಾ (Hindi Imposition ) ಹೇರಿಕೆಯಲ್ಲಿ ಅಲ್ಲ, ನಾವೀನ್ಯತೆಯಲ್ಲಿ ಇರುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಪ್ರತಿಪಾದಿಸಿದರು.

"ಪ್ರಸ್ತುತ ಕಾಲಘಟ್ಟದಲ್ಲಿ ಕೃತಕ ಬುದ್ಧಿಮತ್ತೆ ಬಹಳ ವೇಗವಾಗಿ ಸಾಗುತ್ತಿದೆ. ಇಂತಹ ಎಐ ಯುಗದಲ್ಲೂ ಶಾಲೆಗಳಲ್ಲಿ ತ್ರಿಭಾಷಾ ಕಲಿಕೆ ಸೂತ್ರವನ್ನು ಒತ್ತಾಯಿಸುವುದು ಅಪ್ರಸ್ತುತ" ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ಕೇಂದ್ರ ಸರ್ಕಾರದ ವಿರುದ್ಧ ಜಾಲತಾಣದ 'ಎಕ್ಸ್'​ನಲ್ಲಿ ಟೀಕೆ ಮುಂದುವರಿಸಿರುವ ಸ್ಟಾಲಿನ್​, "ಹಿಂದಿಯನ್ನು ಪ್ರತಿಪಾದಿಸುವ ಬಿಜೆಪಿ ನಾಯಕರು ಉತ್ತರ ಭಾರತದಲ್ಲಿ ಚಹಾ, ಪಾನಿ ಪುರಿ ಖರೀದಿಸಲು ಅಥವಾ ಶೌಚಾಲಯಗಳನ್ನು ಬಳಸಲು ನೀವು ಹಿಂದಿಯನ್ನು ಅರಿತಿರಬೇಕು ಎಂದು ಇಲ್ಲಿ ಒತ್ತಾಯಿಸುತ್ತಿದ್ದಾರೆ" ಎಂದು ಬರೆದಿದ್ದಾರೆ.

"ಎಐ ಯುಗದಲ್ಲಿ ಶಾಲೆಗಳಲ್ಲಿ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ಒತ್ತಾಯಿಸುವುದು ಅನಗತ್ಯ. ಸುಧಾರಿತ ಅನುವಾದ ತಂತ್ರಜ್ಞಾನವು ಈಗಾಗಲೇ ಭಾಷಾ ಅಡೆತಡೆಗಳನ್ನು ತಕ್ಷಣವೇ ನಿರ್ಮೂಲನೆ ಮಾಡುತ್ತದೆ. ಹೆಚ್ಚುವರಿ ಭಾಷೆಗಳು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು" ಎಂದು ವಾದಿಸಿದ್ದಾರೆ.

"ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದುವಾಗ ತಮ್ಮ ಮಾತೃಭಾಷೆ ಮತ್ತು ಇಂಗ್ಲಿಷ್ ಅನ್ನು ಕರಗತ ಮಾಡಿಕೊಳ್ಳುವತ್ತ ಗಮನಹರಿಸಬೇಕು. ಅಗತ್ಯ ಬಿದ್ದಲ್ಲಿ, ಇತರೆ ಭಾಷೆಯನ್ನು ಅವರು ಕಲಿಯಬಹುದು. ನಿಜವಾದ ಪ್ರಗತಿ ನಾವೀನ್ಯತೆಯಲ್ಲಿದೆ, ಭಾಷಾ ಹೇರಿಕೆಯಲ್ಲಿ ಅಲ್ಲ. ರಾಜ್ಯ ಮತ್ತು ಅದರ ಭಾಷೆಯನ್ನು ರಕ್ಷಿಸುವ ಹೋರಾಟದಲ್ಲಿ ಡಿಎಂಕೆ ಸದಾ ಒಂದು ಹೆಜ್ಜೆ ಮುಂದಿರುತ್ತದೆ" ಎಂದು ಸ್ಟಾಲಿನ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net