ಕೇಂದ್ರ ಸರ್ಕಾರ ನಮಗೆ ಖಾಲಿ ಚೆಂಬು ಕೊಟ್ಟಿದೆ: ಬಜೆಟ್​ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ | Union Budget​ 2025

ವಿಜಯವಾಣಿ - 2025-02-01T160104.388
Published on

Union Budget 2025: ಇಂದು 8ನೇ ಬಾರಿಗೆ ಕೇಂದ್ರ ಬಜೆಟ್​ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಲವು ಕ್ಷೇತ್ರಗಳಿಗೆ ಬಂಪರ್​ ಅನುದಾನ ಘೋಷಿಸಿದ್ದಾರೆ. ಉದ್ಯೋಗಿಗಳ ತೆರಿಗೆ ವಿಷಯದಲ್ಲಿ ಭಾರೀ ಗಮನಸಳೆದ ಬಜೆಟ್​ ಬಗ್ಗೆ ದೇಶದ ಜನತೆಯಲ್ಲಿ ಕೊಂಚ ಮಂದಹಾಸ ಮೂಡಿದೆ. ಇನ್ನು ಈ ಬಾರಿಯ ಬಜೆಟ್​ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು? ಎಂಬುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಬಜೆಟ್​ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇಂದು ತಮ್ಮ ತವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, "ನರೇಂದ್ರ ಮೋದಿ ಸರ್ಕಾರ ಕೇವಲ ಬಾಯಿ ಮಾತಿನಲ್ಲಿ ಹೊಟ್ಟೆ ತುಂಬಿಸುವಂತೆ ಬಜೆಟ್ ಮಂಡಿಸಿದೆ.​ ರಾಜ್ಯದ ಬಡವರು, ಕಾರ್ಮಿಕರು, ಯುವಕರಿಗೆ ಅನ್ಯಾಯವಾಗಿದೆ. ಹಲವು ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ಖಾಲಿ ಚೆಂಬು ಬಿಟ್ಟರೆ ಬೇರೇನೂ ಸಿಕ್ಕಿಲ್ಲ" ಎಂದು ವ್ಯಂಗ್ಯವಾಡಿದರು.

"ಬಜೆಟ್​ನಲ್ಲಿ ಏಮ್ಸ್​ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಕುರಿತಂತೆ ಕೇಂದ್ರ ಸಚಿವ ನಡ್ಡಾ ಅವರು ನಮಗೆ ಭರವಸೆ ನೀಡಿದ್ದರು. ಆದರೆ, ಪ್ರಯೋಜನವಿಲ್ಲ. ವಸತಿ ಯೋಜನೆಗೆ ಯಾವುದೇ ಘೋಷಣೆಯಿಲ್ಲ. ರಾಜ್ಯಕ್ಕೆ ಚೆಂಬು ನೀಡುವುದನ್ನು ಕೇಂದ್ರ ಸರ್ಕಾರ ಎಂದಿನಂತೆ ಮುಂದುವರಿಸಿದೆ" ಎಂದರು.

"ಇದು ದೂರದೃಷ್ಟಿಯಿಲ್ಲದ ಬಜೆಟ್. ​ನಾವು ಮನವಿ ಮಾಡಿದ್ದ ಯಾವುದೇ ಯೋಜನೆಯನ್ನು ಇವರು ಘೋಷಣೆ ಮಾಡಿಲ್ಲ. ಇದರೊಟ್ಟಿಗೆ ನೀರಾವರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪವಿಲ್ಲ. ನಾಡಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಬಿಜಿನಿಸ್​ ಕಾರಿಡಾರ್​ ಕುರಿತಂತೆ ಕೂಡ ಪ್ರಸ್ತಾಪ ನಡೆದಿಲ್ಲ. ಬಿಹಾರ್​ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಜೆಟ್​ನಲ್ಲಿ ಭರ್ಜರಿ ಕೊಡುಗೆಗಳನ್ನು ಕೊಟ್ಟಿದ್ದಾರೆ" ಎಂದು ತೀವ್ರ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net