ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋಲಿನ ಭಯಕ್ಕೆ ಎಲ್ಲರೂ ಕಣ್ಣೀರು ಹಾಕ್ತಿದ್ದಾರೆ: ಎಚ್​ಡಿಕೆ ಬಗ್ಗೆ ಸಿಎಂ ಲೇವಡಿ | CM

ವಿಜಯವಾಣಿ (85)
Published on

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕುಡ್ಲೂರು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತು, ನಂತರದಲ್ಲಿ ರಾಮನಗರದಲ್ಲಿ ಸೋತಿದ್ದ ನಿಖಿಲ್ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್‌ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯ ಕಾಡುತ್ತಿದೆ ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಇಲ್ಲಿ ಯೋಗೇಶ್ವರ್ ಗೆಲ್ಲುವುದು ಶತಸಿದ್ಧ ಎಂದು ಗಟ್ಟಿಯಾಗಿ ಹೇಳಿದರು.

"ಈ ಕ್ಷೇತ್ರಕ್ಕೆ 220 ಕೋಟಿ ರೂ. ಅನುದಾನ ಕೊಟ್ಟವನು ನಾನು. ಬಿಜೆಪಿ ಅನುಮೋದನೆ ಕೊಟ್ಟು ಸುಮ್ಮನಾಗಿದ್ರು. ಯೋಗೇಶ್ವರ್​ಗೆ ಇಲ್ಲಿನ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು. ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು. ದೇವೇಗೌಡ್ರು ಹೇಳಿದ್ರು ಕಟುಕರಿಗೆ ಕಣ್ಣೀರು ಬರಲ್ಲ ಅಂತ. ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೋಗಿ ಅಳ್ರಿ ಗೌಡ್ರೆ. ಇಲ್ಲಿ ಅತ್ತರೆ ಏನು ಪ್ರಯೋಜನ?" ಎಂದು ಲೇವಡಿ ಮಾಡಿದರು.

"ನಾನು ಈಗಾಗಲೇ ಕ್ಷೇತ್ರಕ್ಕೆ 500 ಕೋಟಿ ರೂ.ಗೂ ಹೆಚ್ಚು ಕೊಟ್ಟಿದ್ದೀನಿ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡ್ತೀನಿ. ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರವೇ ಇರುತ್ತೆ, ಕುಮಾರಸ್ವಾಮಿ ಸರ್ಕಾರ ಬರಲ್ಲ. ಅನುದಾನ ಕೊಡೋದು ನಾನು, ಡಿ.ಕೆ. ಶಿವಕುಮಾರ್. ಕೂಲಿ ಮಾಡಿದ್ದೀವಿ, ಓಟ್ ಕೊಡಿ ಅಂತಿದೀವಿ. 5 ಗ್ಯಾರಂಟಿ ಯೋಜನೆ ಕೊಟ್ಡಿದೀವಲ್ವ ನಾವು? ಪ್ರತಿ ತಿಂಗಳು ಎರಡು ಸಾವಿರ ದುಡ್ಡು ಕೊಡ್ತಿರೋದು ನಾವಲ್ಲವೇ? ನೀವು ಉಚಿತವಾಗಿ ಬಸ್ ನಲ್ಲಿ ಓಡಾಡೋ ಹಾಗೆ ಮಾಡಿದ್ದು ನಮ್ಮ ಸರ್ಕಾರ ಅಲ್ವಾ? ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ರಾ?" ಎಂದು ತಿಳಿಸಿದರು.

"ಕಣ್ಣೀರಿಡುವ ಗಂಡಸನ್ನು ನಂಬಬಾರದು ಅಂತ ನಮ್ಮ ಕಡೆ ಒಂದು ಗಾದೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಜಮೀನಿಗೆ ನೀರು ಹರಿಯುತ್ತಾ? ಯಾರೂ ನಮ್ಮನ್ನು ಇನ್ವಿಟೇಶನ್ ಕೊಟ್ಟು ರಾಜಕೀಯಕ್ಕೆ ಬನ್ನಿ ಅಂತ ಕರೆದಿಲ್ಲ. ಸೇವೆ ಮಾಡಬೇಕು ಅಂತ ಬಂದಿದ್ದೀವಿ. ಗ್ಯಾರಂಟಿ ಯೋಜನೆ ಮೂಲಕ 1.69 ಕೋಟಿ ಕುಟುಂಬಗಳಿಗೆ ನೆರವಾಗುತ್ತಿದ್ದೇವೆ. ಸರ್ಕಾರದ ಸಾಧನೆ ನೋಡಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೇ ನಮಗೆ ಪತ್ರ ಬರೆದಿದ್ದಾರೆ" ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net